ಎರ್ನಾಕುಳಂ: ಸುಪ್ರೀಂಕೋರ್ಟು ಆದೇಶದ ಹಿನ್ನೆಲೆಯಲ್ಲಿ ಕೊಚ್ಚಿ ಮರಡ್ ನಗರಸಭೆ ವ್ಯಾಪ್ತಿಯಲ್ಲಿನ ನಾಲ್ಕು ಬಹು ಅಂತಸ್ತಿನ ಕಟ್ಟಡದಲ್ಲಿ ಎರಡನ್ನು ಶನಿವಾರ ಸ್ಪೋಟಕ ಬಳಸಿ ನೆಲಸಮಗೊಳಿಸಲಾಯಿತು. ಮರಡ್ ಹಿನ್ನೀರಿಗೆ ಹೊಂದಿಕೊಂಡಿದ್ದ ಕುಂಡನ್ನೂರಿನ ಹೋಲಿಫೈತ್ ಎಚ್‍ಟುಓ ಹಾಗೂ ನೆಟ್ಟೂರ್ ಆಲ್ಫಾ ಸೆರಿನ್ ಟವರನ್ನು ಭಾರಿ ರಕ್ಷಣೆಯೊಂದಿಗೆ ಸ್ಪೋಟಕ ಸಿಡಿಸಿ ಕೆಡವಲಾಗಿದೆ. ಕಟ್ಟಡದ ಆಸುಪಾಸಿನ ಸುಮಾರು 2ಸಾವಿರ ಮಂದಿಯನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದ್ದು, ಶನಿವಾರ ಮೂರುಬಾರಿ ಸೈರನ್ ಮೊಳಗುವಿಕೆಯೊಂದಿಗೆ ಎರಡೂ ಕಟ್ಟಡಗಳನ್ನು ನೆಲಸಮಗೊಳಿಸಲಾಗಿದೆ. ರಕ್ಷಣಾಕಾರ್ಯಗಳಿಗಾಗಿ 300ಕ್ಕೂ ಹೆಚ್ಚು ಪೊಲೀಸರನ್ನು ಸಥಳದಲ್ಲಿ ನಿಯೋಜಿಸಲಾಗಿತ್ತು. 500ಮೀ. ಅಂತರದಲ್ಲಿ ಕಾರ್ಯಾಚರಣೆಯನ್ನು ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಗಿತ್ತು.
ಮೊದಲ ಕಟ್ಟಡವನ್ನು ಕೆಡಹಿದ ಸುಮಾರು 20ನಿಮಿಷಗಳ ನಂತರ ಎರಡನೇ ಕಟ್ಟಡವನ್ನು ನೆಲಸಮಗೊಳಿಸಲಾಗಿದೆ. ಕಟ್ಟಡ ಧರಾಶಾಯಿಯಾಗುವ ಸಂದರ್ಭ ಭಾರಿ ಪ್ರಮಾಣದಲ್ಲಿ ಧೂಳು, ಮಿಶ್ರಿತ ಹೊಗೆ ಕಂಡುಬಂದಿದ್ದು, ನಾಲ್ಕು ಅಗ್ನಿಶಾಮಕ ದಳ ನಿರಂತರ ನೀರು ಹಾಯಿಸುವ ಮೂಲಕ ಧೂಳು ನಿಯಂತ್ರಣಕ್ಕೆ ತಂದಿದೆ.ಆಸುಪಾಸು ಹಲವಾರು ಮನೆಗಳಿದ್ದು, ಈ ಮನೆಗಳಿಗೆ ಕಿಂಚಿತ್ತೂ ಹಾನಿಯಾಗದ ರೀತಿಯಲ್ಲಿ ವಿಶೇಷ ತಂತ್ರಜ್ಞಾನದೊಂದಿಗೆ ಕಾರ್ಯಾಚರಣೆ ನಡೆಸಲಾಗಿದೆ.ಆಕಾಶದೆತ್ತರದ ಕಟ್ಟಡಗಳು ಕ್ಷಣಾರ್ಧದಲ್ಲಿ ಧರೆಗುರುಳುವಂತಾಗಿದೆ.
ಇಂದೂ ನಡೆಯಲಿದೆ ಕಾರ್ಯಾಚರಣೆ:
ಕೊಚ್ಚಿ ಮರಡ್ ನಗರಸಭೆ ವ್ಯಾಪ್ತಿಯ ಒಟ್ಟು ನಾಲ್ಕು ಕಟ್ಟಡಗಳಲ್ಲಿ ಇನ್ನೂ ಎರಡು ಕಟ್ಟಡಗಳನ್ನು ನೆಲಸಮಗೊಳಿಸಬೇಕಾಗಿದ್ದು, ಜನವರಿ 12ರಂದು ಕಾರ್ಯಾಚರಣೆ ಮುಂದುಯವರಿಯಲಿದೆ. ಸುಪ್ರೀಂಕೋರ್ಟು ನೆಲಸಮಗೊಳಿಸಲು ಆದೇಶಿಸಿರುವ ಗೋಲ್ಡನ್ ಕಾಯಲೋರ ಕಟ್ಟಡವನ್ನು ಬೆಳಗ್ಗೆ 11ಕ್ಕೆ ಹಾಗೂ ಜೈನ್ ಕೊರಾಲ್ಕೋ ಕಟ್ಟಡವನ್ನು ಮಧ್ಯಾಹ್ನ 2.30ಕ್ಕೆ ಸ್ಪೋಟಕ ಬಳಸಿ ಕೆಡವಲಾಗುತ್ತದೆ. ಎರಡು ಕಟ್ಟಡಗಳನ್ನು ಸ್ಪೋಟಕದೊಂದಿಗೆ ನೆಲಸಮಗೊಳಿಸುತ್ತಿದ್ದಂತೆ ಜನತೆಯಲ್ಲಿ ಮನೆಮಾಡಿದ್ದ ಆತಂಕದ ವಾತಾವರಣ ದೂರಾಗಿದ್ದು,ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ. ಭಾರಿ ಪ್ರಮಾಣದಲ್ಲಿ ತ್ಯಾಜ್ಯ ಸಂಗ್ರಹವಾಗಿದ್ದು, ಇದನ್ನು ಎರಡುವರೆ ತಿಂಗಳ ಒಳಗಾಗಿ ಸಂಪೂರ್ಣ ಶುಚೀಕರಿಸಿ ನೀಡುವುದಾಗಿ ಗುತ್ತಿಗೆವಹಿಸಿಕೊಂಡಿರುವ ಸಂಸ್ಥೆ ತಿಳಿಸಿದೆ.




