ಪ್ಯಾರಿಸ್: ವಿಶ್ವದಾದ್ಯಂತ ಕೊರೋನಾ ವೈರಸ್ ತನ್ನ ರುದ್ರತಾಂಡವವನ್ನು ಮುಂದುವರೆಸುತ್ತಿದ್ದು, ಮಹಾಮಾರಿ ವೈರಸ್'ಗೆ ಜಗತ್ತಿನಾದ್ಯಂದ 10,000 ಮಂದಿ ಬಲಿಯಾಗಿದ್ದಾರೆ. ಇದರಂತೆ ಸೋಂಕಿತರ ಸಂಖ್ಯೆ 244,421 ಕ್ಕೆ ಏರಿಕೆಯಾಗಿದೆ.
ವಿಶ್ವದ 145 ದೇಶಗಳಲ್ಲಿ ಕೊರೋನಾ ವೈರಸ್ ಕಾಣಿಸಿಕೊಂಡಿದ್ದು, ಈವರೆಗೂ 244,421 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ವರದಿಗಳು ತಿಳಿಸಿವೆ. ಕೊರೋನಾ ಪೀಡಿತ ರಾಷ್ಟ್ರವೆಂದು ಕರೆಯಲಾಗುತ್ತಿದ್ದ ಚೀನಾದಲ್ಲಿ ಇದೀಗ ವೈರಸ್ ಆಶ್ಚರ್ಯಕರ ರೀತಿಯಲ್ಲಿ ನಿಯಂತ್ರಣಕ್ಕೆ ಬಂದಿದ್ದು, ಇದೀಗ ಆ ಸ್ಥಾನಕ್ಕೆ ಇಟಲಿ ಸಾಗತೊಡಗಿದೆ. ಇಟಲಿಯಲ್ಲಿ ಗುರುವಾರ ಒಂದೇ ದಿನ ವೈರಸ್'ಗೆ 427 ಮಂದಿ ಬಲಿಯಾಗಿದ್ದು, ಮೃತರ ಸಂಖ್ಯೆ 3,245ಕ್ಕೆ ಏರಿಕೆಯಾಗಿದೆ. ಸೋಂಕಿತರ ಸಂಖ್ಯೆ 41,000ಕ್ಕೂ ಹೆಚ್ಚು ಕಂಡುಬಂದಿದೆ.
ಇಟಲಿಯಲ್ಲಿ ಈ ವರೆಗೂ 41,000 ಮಂದಿಯಲ್ಲಿ ಸೋಂಕು ಕಂಡು ಬಂದಿದ್ದರೆ, ಜರ್ಮನಿ, ಇರಾನ್ ಮತ್ತು ಸ್ಪೇನ್ ರಾಷ್ಟ್ರಗಳಲ್ಲಿ 15,000 ಮಂದಿಯಲ್ಲಿ ಪತ್ತೆಯಾಗಿದೆ. ಇನ್ನು ಅಮೆರಿಗಾದಲ್ಲಿ 13,000 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, 200 ಮಂದಿ ಬಲಿಯಾಗಿದ್ದಾರೆ.


