ಕಾಸರಗೋಡು: ವಿಶ್ವವ್ಯಾಪಿ ಆತಂಕಕ್ಕೆ ಕಾರಣವಾಗಿರುವ ಮಾರಕ ಕರೊನಾ ಕಾಸರಗೋಡು ಜಿಲ್ಲೆಯಲ್ಲೂ ಕಾಲಿರಿಸಿದ್ದು, ಇದೇ ಮೊದಲ ಬಾರಿಗೆ ವೈರಸ್ ಬಾಧಿತ ವ್ಯಕ್ತಿಯನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಐಸೊಲೇಶನ್ ವಾರ್ಡಿಗೆ ದಾಖಲಿಸಲಾಗಿದೆ. ಮಲಪ್ಪುರಂ ಜಿಲ್ಲೆಯಲ್ಲೂ ಇಬ್ಬರಲ್ಲಿ ವೈರಸ್ ಖಚಿತಪಡಿಸಲಾಗಿದ್ದು, ಈ ಮೂಲಕ ರಾಜ್ಯದಲ್ಲಿ ಸೋಂಕು ಬಾಧಿತರ ಸಂಖ್ಯೆ 24ಕ್ಕೇರಿದೆ.
ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ವ್ಯಕ್ತಿಯೊಬ್ಬರಲ್ಲಿ ಅತಿಯಾದ ಜ್ವರ ಮತ್ತು ಶೀತ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಆಗಮಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಲಪ್ಪುಯದಲ್ಲಿದ್ದ ಇವರು ಭಾನುವಾರ ಊರಿಗೆ ಆಗಮಿಸಿದ್ದರು. ಕೇರಳದಲ್ಲಿ ಒಟ್ಟು 12740ಮಂದಿಯ ಮೇಲೆ ನಿಗಾಯಿರಿಸಲಾಗುತ್ತಿದೆ. ಸೋಮವಾರ 2297ಮಂದಿಯ ರಕ್ತದ ಮಾದರಿ ತಪಾಸಣೆ ನಡೆಸಲಾಗಿದ್ದು, ಇದರಲ್ಲಿ 1693ಮಂದಿಯ ತಪಸಣಾ ವರದಿ ನೆಗೆಟಿವ್(ವೈರಸ್ ಇಲ್ಲ) ಆಗಿದೆ. ಸೋಮವಾರ ಒಂದೇ ದಿನ 72ಮಂದಿಯನ್ನು ಆಸ್ಪತ್ರೆಗಳಿಗೆ ದಾಖಲಿಸಿರುವುದಾಗಿ ಮುಖ್ಯ ಮಂತ್ರಿ ಪಿಣರಾಯಿ ವಿಜಯನ್ ತಿರುವನಂತಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸೋಮವಾರ ತಿರುವನಂತಪುರದಲ್ಲಿ ಸರ್ವಪಕ್ಷ ಸಭೆ ಆಯೋಜಿಸುವ ಮೂಲಕ ಕರೊನಾ ವೈರಸ್ ವ್ಯಾಪಿಸುವುದನ್ನು ತಡೆಗಟ್ಟಲು ಅಗತ್ಯ ಮುಂಜಾಗ್ರತಾ ಕ್ರಮ ಮತ್ತಷ್ಟು ಚುರುಕುಗೊಳಿಸಲು ತೀರ್ಮಾನಿಸಲಾಯಿತು. ಉತ್ಸವ, ಮದುವೆ ಸಮಾರಂಭಗಳಲ್ಲಿ ನಿಗದಿತ ಸಂಖ್ಯೆ ಜನರನ್ನಷ್ಟೆ ಪಾಲ್ಗೊಳ್ಳಿಸುವ ಮೂಲಕ ಕಾರ್ಯಕ್ರಮ ನಡೆಸಬೇಕು. ಬ್ರಹ್ಮಕಲಶೋತ್ಸವ ಸಹಿತ ಉತ್ಸವಾದಿ ಕಾರ್ಯಕ್ರಮಗಳನ್ನು ನೈಮಿತ್ತಿಕ ಕಾರ್ಯಕ್ರಮಗಳಿಗಷ್ಟೇ ಸೀಮಿತಗೊಳಿಸುವಂತೆಯೂ ಸೂಚಿಸಲಾಗಿದೆ. ಕುಟುಂಬ ನ್ಯಾಯಾಲಯಗಳಲ್ಲಿ ಹೆಚ್ಚಿನ ಜನದಟ್ಟಣೆಯಿರುತ್ತಿದ್ದು, ಕೆಲವು ದಿವಸಗಳ ವರೆಗೆ ಕಲಾಪ ಮುಂದೂಡಲು ಹೈಕೋರ್ಟು ರಿಜಿಸ್ಟ್ರಾರ್ ಜತೆ ಮಾತುಕತೆ ನಡೆಸುವುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ. ವಿಮಾನ ಪ್ರಯಾಣಿಕರೂ ಹೆಚ್ಚಿನ ಜಾಗ್ರತೆ ಪಾಲಿಸುವಂತೆ ಸೂಚಿಸಲಾಗಿದೆ.
ನೀರ್ಚಾಲು ಪರಿಸರದಲ್ಲಿ ಓರ್ವ ಶಂಕಿತ ವ್ಯಕ್ತಿ-ನಿಗಾ ಘಟಕಕ್ಕೆ ದಾಖಲು
ಬದಿಯಡ್ಕ: ನೀರ್ಚಾಲು ಸಮೀಪದ ಏಣಿಯರ್ಪು ಎಂಬಲ್ಲಿ ವ್ಯಕ್ತಿಯೊಬ್ಬರಲ್ಲಿ ಅನುಮಾನಾಸ್ಪದ ಅನಾರೋಗ್ಯ ಕಂಡುಬಂದ ಹಿನ್ನೆಲೆಯಲ್ಲಿ ಸೋಮವಾರ ಅವರನ್ನು ಆರೋಗ್ಯ ಅಧಿಕ್ರತರು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ಕರೆದೊಯ್ದಿದ್ದಾರೆ.
ಸಂಶಯಿತ ವ್ಯಕ್ತಿ ದಕ್ಷಿಣ ಕೇರಳದಲ್ಲಿ ಖಾಸಗೀ ಉದ್ಯೋಗಿಯಾಗಿದ್ದು ಕೆಲವು ದಿನಗಳ ಹಿಂದೆ ಊರಿಗೆ ಮರಳಿದ್ದರು. ಎರಡು ದಿನಗಳಿಂದ ಅನಾರೋಗ್ಯ ಉಂಟಾಗಿದ್ದು ಸಂಶಯಿತ ಕೊರೊನಾ ಹಿನ್ನೆಲೆಯಲ್ಲಿ ಕಾಸರಗೋಡು ಸರ್ಕಾರಿ ಆಸ್ಪತ್ರೆ ನಿಗಾ ಕೇಂದ್ರಕ್ಕೆ ಕರೆದೊಯ್ಯಲಾಗಿದೆ.


