ಪ್ಯಾರಿಸ್: ಮಹಾಮಾರಿ ಕೊರೋನಾ ವೈರಸ್ ವಿಶ್ವದಾದ್ಯಂತ ತನ್ನ ಕಬಂಧ ಬಾಹುವನ್ನು ವಿಸ್ತರಿಸಿದ್ದು, ವಿಶ್ವದ 110 ದೇಶಗಳಲ್ಲಿ ವೈರಸ್ ವ್ಯಾಪಿಸಿರುವ ಪರಿಣಾಮ ಈ ವರೆಗೆ 4001 ಮಂದಿ ಸಾವನ್ನಪ್ಪಿದ್ದಾರೆಂದು ವರದಿಗಳು ತಿಳಿಸಿವೆ.
ಇದರಂತೆ ಸೋಂಕಿತರ ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಈ ವರೆಗೂ ವಿಶ್ವದಾದ್ಯಂತ 1.14 ಲಕ್ಷ ಮಂದಿಯಲ್ಲಿ ಸೋಂಕು ಪತ್ತೆಯಾಗಿರುವುದಾಗಿ ವರದಿಗಳು ತಿಳಿಸಿವೆ.
ಈ ನಡುವೆ ಭಾರತದಲ್ಲಿ ದಿನೇ ದಿನೇ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಸೋಮವಾರ ಮತ್ತೆ 8 ಜನರಲ್ಲಿ ಸೋಂಕು ತಗುಲಿರುವುದು ಖಚಿತಪಟ್ಟಿದೆ. ಇದರೊಂದಿಗೆ ದೇಶದಲ್ಲಿ ಕೊರೋನಾ ವೈರಾಣು ಪೀಡಿತರ ಸಂಖ್ಯೆ 47ಕ್ಕೆ ಏರಿಕೆಯಾಗಿದೆ. ಆತಂಕದಲ ವಿಚಾರವೆಂದರೆ ಕೇರಳದ ಎರ್ನಾಕುಲಂನಲ್ಲಿ ಇಟಲಿಯಿಂದ ಮರಳಿದ್ದ 3 ವರ್ಷದ ಮಗುವಿಗೂ ಕೊರೋನಾ ಕಾಣಸಿಕೊಂಡಿದೆ.
ಭಾರತದಲ್ಲಿ ಮಗುವಿಗೆ ಕೊರೋನಾ ಕಾಣಿಸಿಕೊಕಂಡಿದ್ದು ಇದೇ ಮೊದಲು. ಇತರೆ ಪ್ರಕರಣಗಳು ಬೆಂಗಳೂರು, ಪಂಜಾಬ್, ಪುಣೆ. ದೆಹಲಿ, ಉತ್ತರಪ್ರದೇಶ ಹಾಗೂ ಜಮ್ಮುವಿನಲ್ಲಿ ದೃಢಪಟ್ಟಿವೆ.
ಅಮೆರಿಕಾದಿಂದ ಬಂದ ಒಬ್ಬ ಬೆಂಗಳೂರಿಗನಿಗೆ, ದುಬೈಗೆ ಹೋಗಿ ಬಂದಿದ್ದ ಪುಣೆಯ ದಂಪತಿ, ಇರಾನ್'ಗೆ ಹೋಗಿ ಬಂದ ಜಮ್ಮುವಿನ ಒಬ್ಬರಿಗೆ, ಆಗ್ರಾದಲ್ಲಿ ಕೊರೋನಾಪೀಡಿತರ ಸಂಪರ್ಕಕ್ಕೆ ಹೋಗಿ ಬಂದ ಉತ್ತರಪ್ರದೇಶದ ಮೇರಠ್'ನ ಒಬ್ಬರಿಗೆ ಹಾಗೂ ಇಟಲಿಗೆ ಹೋಗಿ ಬಂದ ದೆಹಲಿ ಹಾಗೂ ಪಂಜಾಬ್'ನ ಹೋಶಿಯಾರ್'ಪುರದ ತಲಾ ಒಬ್ಬರಿಗೆ ಕೊರೋನಾ ತಗುಲಿದೆ. ಆದರೆ, ಯಾವುದೇ ಸಾವು ಸಂಭವಿಸಿಲ್ಲ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.


