ಕಾಸರಗೋಡು: ಕರೊನಾ ಸೋಂಕು ವೇಗದಲ್ಲಿ ಎಲ್ಲೆಡೆ ಹರಡುತ್ತಿರುವಂತೆ ಕೇರಳದಲ್ಲಿ ಮಾ.24 ರಂದು ವಿವಿಧ ಜಿಲ್ಲೆಗಳ 14 ಮಂದಿಗೆ ಕರೊನಾ ದೃಢೀಕರಿಸಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ತಿರುವನಂತಪುರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕಾಸರಗೋಡು ಜಿಲ್ಲೆಯಲ್ಲಿ ಮಂಗಳವಾರ 6 ಮಂದಿಗೆ ಕರೊನಾ ದೃಢೀಕರಿಸಲಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಕರೊನಾ ಬಾಧಿತರ ಸಂಖ್ಯೆ 44 ಕ್ಕೇರಿತು. ರಾಜ್ಯದಲ್ಲಿ ಇದು ವರೆಗೆ ಒಟ್ಟು 105 ಮಂದಿಗೆ ಕರೊನಾ ದೃಢೀಕರಿಸಲಾಗಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೇರಳದಲ್ಲಿ ಒಟ್ಟು 72460 ಮಂದಿ ನಿಗಾದಲ್ಲಿದ್ದಾರೆ. ಇವರಲ್ಲಿ 71994 ಮಂದಿ ಅವರವರ ಮನೆಗಳಲ್ಲಿ ನಿಗಾದಲ್ಲಿದ್ದರೆ, 466 ಮಂದಿ ಆಸ್ಪತ್ರೆಗಳಲ್ಲಿ ನಿಗಾದಲ್ಲಿದ್ದಾರೆ. ಇಂದು ಮಾತ್ರ 164 ಮಂದಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಈಗಾಗಲೇ 4516 ಮಂದಿಯ ಸ್ಯಾಂಪಲ್‍ಗಳಲ್ಲಿ 3331 ಮಂದಿ ನೆಗೆಟಿವ್ ಫಲಿತಾಂಶ ಲಭಿಸಿದೆ.
ಮಂಗಳವಾರ ಕರೊನಾ ದೃಢೀಕರಿಸಿದವರಲ್ಲಿ 8 ಮಂದಿ ದುಬೈಯಿಂದ ಬಂದವರು. ಕತ್ತರ್ ಮತ್ತು ಯು.ಕೆ.ಯಿಂದ ಬಂದ ತಲಾ ಒಬ್ಬರಿಗೆ ಹಾಗು ಕೊರೊನಾ ಬಾಧಿತರೊಂದಿಗಿನ ನಿಕಟ ಸಂಪರ್ಕದಲ್ಲಿದ್ದ ಮೂವರಿಗೆ ಕೊರೊನಾ ಬಾಧಿಸಿದೆ. ಆರೋಗ್ಯ ಸಿಬ್ಬಂದಿಗೂ ಕರೊನಾ ದೃಢೀಕರಿಸಲಾಗಿದೆ.
ಜಿಲ್ಲೆಯಲ್ಲಿ 2736 ಮಂದಿ ನಿಗಾದಲ್ಲಿ :
ಕೋವಿಡ್-19 ಹರಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಒಟ್ಟು 2736 ಮಂದಿ ನಿಗಾದಲ್ಲಿದ್ದಾರೆ. ಇದರಲ್ಲಿ 85 ಮಂದಿ ಆಸ್ಪತ್ರೆಗಳಲ್ಲೂ, 2651 ಮನೆಗಳಲ್ಲಿ ನಿಗಾದಲ್ಲಿದ್ದಾರೆ. ನೂತನವಾಗಿ 99 ಮಂದಿಯ ಸ್ಯಾಂಪಲ್‍ಗಳನ್ನು ತಪಾಸಣೆಗೆ ಕಳುಹಿಸಲಾಗಿದೆ. 202 ಮಂದಿಯ ತಪಾಸಣೆಯ ಫಲಿತಾಂಶ ಇನ್ನೂ ಬರಬೇಕಿದೆ. ಈ ವರೆಗೆ 44 ಮಂದಿಗೆ ಕರೊನಾ ಸೋಂಕು ಬಾಧೆ ಖಚಿತವಾಗಿದೆ. ಕಲ್ಲಿಕೋಟೆಯಲ್ಲಿ ಮಂಗಳವಾರ ಇಬ್ಬರಿಗೆ ಕೊರೊನಾ ದೃಢೀಕರಿಸಲಾಗಿದೆ.
ಲಾಕ್ ಡೌನ್ ಹಿನ್ನೆಲೆಯಲ್ಲಿ ಕಾಸರಗೋಡಿನಲ್ಲಿ ಸಂಪೂರ್ಣವಾಗಿ ಬಂದ್ ಪ್ರತೀತಿ ವ್ಯಕ್ತವಾಯಿತು. ನಿತ್ಯೋಪಯೋಗಿ ಸಾಮಾಗ್ರಿಗಳ ಅಂಗಡಿಗಳನ್ನು ತೆರೆಯುವ ಸಂದರ್ಭಗಳಲ್ಲಿ ಐದು ಮಂದಿಗಿಂತ ಅಧಿಕ ಗುಂಪುಗೂಡದಿರಲು ಮುಖ್ಯಮಂತ್ರಿ ತಿಳಿಸಿದ್ದಾರೆ. ಅನಗತ್ಯವಾಗಿ ಮನೆಯಿಂದ ಪೇಟೆಗೆ ಬಂದಲ್ಲಿ ಕ್ರಮ ತೆಗೆದುಕೊಳ್ಳಲಾಗುವುದೆಂದು ಹೇಳಿದ ಮುಖ್ಯಮಂತ್ರಿ ಆಸ್ಪತ್ರೆ, ಔಷಧಿ, ಹಾಲು ಮೊದಲಾದ ಅಗತ್ಯಗಳಿಗಾಗಿ ಮಾತ್ರವೇ ಖಾಸಗಿ ವಾಹನಗಳನ್ನು ಬಳಸಬೇಕೆಂದು ಅವರು ಹೇಳಿದರು.


