ಕಾಸರಗೋಡು: ನಗರದ ಅಂಗೀಕೃತ ಬೀದಿ ಬದಿ ವ್ಯಾಪಾರಿಗಳ ಪುನರ್ವಸತಿ ಕಾರ್ಯಕ್ರಮದನ್ವಯ, ಇವರಿಗೆ ಹೊಸ ಬಸ್ ನಿಲ್ದಾಣ ವಠಾರದಲ್ಲಿ 56ಗೂಡಂಗಡಿ ನಿರ್ಮಿಸಿಕೊಡುವ ನಗರಸಭೆಯ ಕ್ರಮವನ್ನು ಖಾಸಗಿ ಬಸ್ ಮಾಲಿಕರ ಸಂಘ ಖಂಡಿಸಿದ್ದು, ಯಾವುದೇ ಮಾತ್ರಕ್ಕೂ ಬಸ್ ನಿಲ್ದಾಣದೊಳಗೆ ಗೂಡಂಗಡಿ ನಿರ್ಮಿಸಿಕೊಡದಂತೆ ಸಂಘಟನೆ ಪದಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ನಗರದ ಎಂ.ಜಿ ರಸ್ತೆಯಿಂದ ತೊಡಗಿ ಜನರಲ್ ಆಸ್ಪತ್ರೆ ವರೆಗೆ ರಸ್ತೆ ಎರಡೂ ಪಾಶ್ರ್ವದಲ್ಲಿರುವ ಗೂಡಂಗಡಿ ವ್ಯಾಪಾರಿಗಳನ್ನು ತೆರವುಗೊಳಿಸಿ, ಇವರಿಗೆ ಬಸ್‍ನಿಲ್ದಾಣದೊಳಗೆ ಶಾಶ್ವತ ವ್ಯಾಪಾರಿ ಸಂಸ್ಥೆ ಒದಗಿಸಿಕೊಡುವುದು ನಗರಸಭೆಯ ಯೋಜನೆಯಾಗಿದ್ದು, ಇದಕ್ಕೆ ಆರಂಭದಲ್ಲೇ ವಿಘ್ನ ಎದುರಾಗಿದೆ. ಕಾಸರಗೋಡು ನಗರದಲ್ಲಿ ಭಾರಿ ಟ್ರಾಫಿಕ್ ಜಾಮ್ ಆಗುತ್ತಿರುವುದರಿಂದ ನಿತ್ಯ ಸಮಸ್ಯೆ ಎದುರಿಸಬೇಕಾದ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿನ ಗೂಡಂಗಡಿ ವ್ಯಾಪಾರಿಗಳನ್ನು ತೆರವುಗೊಳಿಸುವಂತೆ ವಿವಿಧ ಸಂಘಟನೆಗಳು ಹಾಗೂ ಜಿಲ್ಲಾಧಿಕಾರಿ ಆಗ್ರಹಿಸಿದ್ದರು. ಇದಕ್ಕಾಗಿ ನಗರಸಭೆ ಈ ವ್ಯಾಪಾರಿಗಳನ್ನು ಗುರುತಿಸಿ ಇವರಿಗೆ ಗುರುತಿನಚೀಟಿ ವಿತರಿಸಿತ್ತು. ಪುನರ್ವಸತಿ ಯೋಜನೆಯನ್ವಯ ಬಸ್‍ನಿಲ್ದಾಣದೊಳಗೆ 56ಗೂಡಂಗಡಿ ನಿರ್ಮಾಣಕ್ಕೆ ನಗರಸಭೆ ರೂಪುರೇಷೆಯನ್ನೂ ತಯಾರಿಸಿತ್ತು. ಅಲ್ಲದೆ ಅಂಗಡಿ ನಿರ್ಮಾಣಕ್ಕೆ ಗುರುತನ್ನೂ ಹಾಕಿತ್ತು. ಬಸ್‍ನಿಲ್ದಾಣ ವಠಾರದ ಜಾಗ ಖಾಸಗಿಬಸ್‍ಗಳಿಗೆ ನಿಲುಗಡೆಗಿರುವ ಏಕ ಸ್ಥಳವಾಗಿದ್ದು, ಇಲ್ಲಿ ಅಂಗಡಿ ನಿರ್ಮಿಸಿದಲ್ಲಿ ಬಸ್‍ಗಳನ್ನು ನಿಲ್ಲಿಸಲು ಬದಲಿ ಜಾಗವಿಲ್ಲ. ಮಾತ್ರವಲ್ಲ ಇದು ಪ್ರಯಾಣಿಕರ ಪಾಲಿಗೂ ಸಮಸ್ಯೆ ಸೃಸ್ಟಿಸಲಿದೆ. ನಗರಸಭೆ ತನ್ನ ತೀರ್ಮಾನದಿಂದ ಹಿಂದೆ ಸರಿಯಬೇಕು. ಬಲವಂತವಾಗಿ ಅಂಗಡಿ ನಿರ್ಮಾಣಕ್ಕೆ ಮುಂದಾದಲ್ಲಿ ಬಸ್‍ನಿಲ್ದಾಣದೊಳಗೆ ಪ್ರವೇಶಿಸದಿರುವ ಬಗ್ಗೆ ತೀರ್ಮಾನ ಕೈಗೊಳ್ಳುವುದು ಅನಿವಾರ್ಯವಾಗಲಿದೆ ಎಂದು ಬಸ್ ಆಪರೇಟರ್ಸ್ ಅಸೋಸಿಯೇಶನ್ ಪದಾಧಿಕಾರಿಗಳು ತಿಳಿಸಿದ್ದಾರೆ.




