ತಿರುವನಂತಪುರ: ಬಿಜೆಪಿ ಕೇರಳ ರಾಜ್ಯಸಮಿತಿಗೆ ನೂತನ ಪದಾಧಿಕಾರಿಗಳನ್ನು ನೂತನ ಅಧ್ಯಕ್ಷ ಕೆ. ಸುರೇಂದ್ರನ್ ಘೋಷಿಸಿದ್ದಾರೆ. ರಾಜ್ಯ ಸಮಿತಿಗೆ ಎ.ಎನ್ ರಾಧಾಕೃಷ್ಣನ್, ಶೋಭಾ ಸುರೇಂದ್ರನ್, ಎ.ಪಿ ಅಬ್ದುಲ್ಲ ಕುಟ್ಟಿ ಸಹಿತ ಹತ್ತು ಮಂದಿಯನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಹಿರಿಯ ಮುಖಂಡ ಎಂ.ಟಿ ರಮೇಶ್ ಸಹಿತ ಆರು ಮಂದಿಯನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಲಾಗಿದೆ. ಜಿ.ಆರ್ ಪದ್ಮಕುಮಾರ್ ಕೋಶಾಧಿಕಾರಿಯಾಗಿದ್ದಾರೆ. ಎ.ಎಸ್ ಕುಮಾರ್, ನಾರಾಯಣನ್ ನಂಬೂದಿರಿ, ಬಿ.ಗೋಪಾಲಕೃಷ್ಣನ್ ಹಾಗೂ ಜಿ.ಸಂದೀಪ್ ವಾರ್ಯರ್ ಅವರನ್ನು ಅಧಿಕೃತ ವಕ್ತಾರರನ್ನಾಗಿ ನೇಮಿಸಲಾಗಿದೆ. ಎಲ್ಲ ವಿಭಾಗದವರನ್ನೂ ಒಳಪಡಿಸಿ ರಾಜ್ಯ ಸಮಿತಿ ಪದಾಧಿಕಾರಿಗಳನ್ನು ನೇಮಿಸಿರುವುದಾಗಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ತಿರುವನಂತಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಅಲ್ಪಸಂಖ್ಯಾತರು, ದುರ್ಬಲ ಹಾಗೂ ಹಿಂದುಳಿದ ವಿಭಾಗದವರು, ಪ.ಜಾತಿ, ಪ.ವರ್ಗದವರನ್ನೂ ಸಮಿತಿಗೆ ಪರಿಗಣಿಸಲಾಗಿದೆ. ಪಟ್ಟಿಯಲ್ಲಿ ಮೂರನೇ ಒಂದು ಸ್ಥಾನ ಇದೇ ಮೊದಲಬಾರಿಗೆ ಮಹಿಳೆಯರಿಗೆ ನೀಡಲಾಗಿದೆ. ಸಿ.ಆರ್ ಪ್ರಪುಲ್‍ಕೃಷ್ಣನ್ ಯುವಮೋರ್ಚಾ ರಾಜ್ಯಾಧ್ಯಕ್ಷರಾಗಿದ್ದಾರೆ. ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ನಿಯೋಜಿತರಾದ ಜಾರ್ಜ್‍ಕುರಿಯನ್ ಅವರು ರಾಷ್ಟ್ರೀಯ ಅಲ್ಪಸಂಖ್ಯಾತ ಸಮಿತಿ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.





