ಬದಿಯಡ್ಕ: ಶಾಲೆ ಎಂಬುದು ಮಕ್ಕಳಿಗೆ ಎರಡನೇ ಮನೆಯಿದ್ದಂತೆ. ಅಧ್ಯಾಪಕ ವೃಂದವು ವಿದ್ಯಾರ್ಥಿಗಳಿಗೆ ಪಾಲಕರ ಸ್ಥಾನದಲ್ಲಿ ನಿಂತು ಮಾರ್ಗದರ್ಶನವನ್ನು ನೀಡುವ ಮೂಲಕ ಅವರ ಸರ್ವತೋಮುಖ ಪ್ರಗತಿಗೆ ಕಾರಣರಾಗುತ್ತಾರೆ ಎಂದು ಕುಂಬ್ಡಾಜೆ ಗ್ರಾಮಪಂಚಾಯಿತಿ ಸದಸ್ಯೆ ಶಾಂತಾ ಎಸ್. ಭಟ್ ಅಭಿಪ್ರಾಯಪಟ್ಟರು.
ಶುಕ್ರವಾರ ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರೀ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬೇರೆ ಶಾಲೆಗೆ ವರ್ಗಾವಣೆಗೊಂಡ ಶಿಕ್ಷಕಿ ಸುಜಯ ಇವರಿಗೆ ನೀಡಿದ ಬೀಳ್ಕೊಡುಗೆ ಹಾಗೂ ಶಾಲೆಯ ಹಳೆವಿದ್ಯಾರ್ಥಿ, ರ್ಯಾಂಕ್ ವಿಜೇತೆ ಶೋಬಿತಾ ಪದ್ಮಾರು ಅವರ ಸನ್ಮಾನ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು.
ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪ್ರಭಾತ್ ಶರ್ಮ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ತಾಳ್ಮೆ, ಸಹನೆಯಿಂದ ಮಕ್ಕಳೊಂದಿಗಿನ ಒಡನಾಟದ ಮೂಲಕ ಅವರಿಗೆ ವಿದ್ಯೆಯನ್ನು ಕಲಿಸುವುದರಲ್ಲಿ ಸುಜಯ ಟೀಚರ್ ಇತರರಿಗೆ ಮಾದರಿಯಾಗಿದ್ದಾರೆ. ಇಂತಹ ಶಿಕ್ಷಕಿಯರು ಶಾಲೆಯ ಪ್ರಗತಿಗೆ ಕಾರಣರಾಗುತ್ತಾರೆ ಎಂದು ಶುಭಕೋರಿದರು. ಶಾಲಾ ವ್ಯವಸ್ಥಾಪಕ ನಾರಾಯಣ ಶರ್ಮ ಬಳ್ಳಪದವು, ಮಾತೃಸಂಘದ ಅಧ್ಯಕ್ಷೆ ದಿವ್ಯಾ ಶುಭಕೋರಿದರು.
ವರ್ಗಾವಣೆಗೊಂಡ ಅಧ್ಯಾಪಿಕೆ ಸುಜಯ ಹಾಗೂ ರ್ಯಾಂಕ್ ವಿಜೇತೆ ಶೋಬಿತಾ ಪದ್ಮಾರು ಸನ್ಮಾನವನ್ನು ಸ್ವೀಕರಿಸಿ ಮಾತನಾಡಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಸ್ವಾಗತಿಸಿ, ಅಧ್ಯಾಪಿಕೆ ಅಂಕಿತಾ ವಂದಿಸಿದರು. ಅಧ್ಯಾಪಿಕೆ ಸೌಮ್ಯ ನಿರೂಪಿಸಿದರು. ರಕ್ಷಕ ಶಿಕ್ಷಕ ಸಂಘದ ಪದಾಧಿಕಾರಿಗಳು, ಸದಸ್ಯರು, ಹಿತೈಷಿಗಳು ಪಾಲ್ಗೊಂಡಿದ್ದರು.

