ಕುಂಬಳೆ: ಸರೋವರ ಕ್ಷೇತ್ರ ಶ್ರೀಅನಂತಪುರ ಅನಂತಪದ್ಮನಾಭ ದೇವಾಲಯ ಪರಿಸರದಲ್ಲಿ ನಡೆಯಲಿರುವ ರಾಷ್ಟ್ರೀಯ ಕನ್ನಡ ಸಿರಿ ಸಮ್ಮೇಳನದ ಹಿನ್ನೆಲೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರನ್ನು ಸಂಘಟನಾ ಸಮಿತಿ ಪದಾಧಿಕಾರಿಗಳು ಸೋಮವಾರ ಶ್ರೀಕ್ಷೇತ್ರಕ್ಕೆ ಧರ್ಮಸ್ಥಳಕ್ಕೆ ತೆರಳಿ ಆಹ್ವಾನಿಸಿ ಅವರ ಅನುಗ್ರಹ ಪಡೆದು ವಿಜ್ಞಾಪನಾ ಪತ್ರ ಸಮರ್ಪಿಸಿದರು.
ಕನ್ನಡ ಭಾಷೆ, ಸಂಸ್ಕøತಿಯ ಸಮಗ್ರ ಬೆಳವಣಿಗೆಗೆ ಪೂರಕವಾಗಿ ಹಮ್ಮಿಕೊಳ್ಳಲಾದ ಕನ್ನಡ ಸಿರಿ ಸಮ್ಮೇಳನ ಯಶಸ್ವಿಯಾಗುವಲ್ಲಿ ಶ್ರೀಮಂಜುನಾಥ ಸ್ವಾಮಿ ಸಹಿತ ಆರಾಧನಾ ಶಕ್ತಿಗಳು ಸಂಪೂರ್ಣ ಅನುಗ್ರಹ ನೀಡುವುದಾಗಿ ತಿಳಿಸಿದ ಹೆಗ್ಗಡೆಯವರು ಕಾರ್ಯಕ್ರಮದ ಯಶಸ್ವಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಾಸರಗೋಡು ಜಿಲ್ಲಾ ಘಟಕ ಸಂಪೂರ್ಣ ಸಹಕರಿಸುವುದಾಗಿ ಈ ಸಂದರ್ಭ ತಿಳಿಸಿದರು.
ಕನ್ನಡ ಸಿರಿ ಸಮ್ಮೇಳನದ ಕಾರ್ಯಾಧ್ಯಕ್ಷ ರಾಂ ಪ್ರಸಾದ್ ಕಾಸರಗೋಡು, ಪ್ರಧಾನ ಕಾರ್ಯದರ್ಶಿ ಭಾಸ್ಕರ ಕೆ., ಮತ್ತಿತರರು ಉಪಸ್ಥಿತರಿದ್ದರು.


