ಮುಳ್ಳೇರಿಯ: ಪ್ರಖರ ತರ್ಕದ ಹವ್ಯಾಸಿ ಅರ್ಥದಾರಿ, ಭಾಗವತ, ಚೆಂಡೆ-ಮದ್ದಳೆ ವಾದಕ ಮತ್ತು ಅನಿವಾರ್ಯತೆಯ ವೇಷಧಾರಿಯೂ ಆಗಿದ್ದ ಪ್ರಗತಿಪರ ಕೃಷಿಕ, ಪೌರಾಣಿಕ ಜಿಜ್ಞಾಸು ಅಡೂರು ಸೂರ್ಯನಾರಾಯಣ ಕಲ್ಲೂರಾಯರ ಜನ್ಮ ಶತಮಾನದ ಹಿನ್ನೆಲೆಯಲ್ಲಿ ಅಡೂರು ತಲ್ಪಚ್ಚೇರಿಯ ಮನೆಯಲ್ಲಿ ಸಂಸ್ಮರಣಾ ಸಮಾರಂಭ ಮತ್ತು ತಾಳಮದ್ದಳೆಯ ನುಡಿನಮನ ನಡೆಯಿತು.
ಮಾ. 8ರಂದು ನಡೆದ ಕಾರ್ಯಕ್ರಮದಲ್ಲಿ ಹಿರಿಯ ಚಿಂತಕ ಬೆಳ್ಳಿಗೆ ನಾರಾಯಣ ಮಣಿಯಾಣಿ ಸಂಸ್ಮರಣಾ ಭಾಷಣಗೈದು ಮಹಾನ್ ಮಾನವತಾವಾದಿ ಮತ್ತು ಜೀವನಪ್ರೀತಿಯ ಪ್ರತೀಕವಾಗಿದ್ದ ಸರಳಾಯರು ಸಾಂಸ್ಕøತಿಕ ಸದಭಿರುಚಿಯ ಮಾರ್ಗದರ್ಶನ ನೀಡುತ್ತಿದ್ದ ಗಣ್ಯರಾಗಿದ್ದರು. ಅವರ ಸಂಸರ್ಗಕ್ಕೆ ಬಂದವರು ಯಾರೂ ಕೂಡಾ ಅವರ ಪ್ರೀತಿಯ ಆತಿಥ್ಯ ಪಡೆಯದೇ ನಿರ್ಗಮಿಸಿದವರಲ್ಲ. ಅವರ ಕುಟುಂಬದಲ್ಲಿಂದು ಪ್ರತಿಭಾ ಪರಂಪರೆಯ ಸಾಧಕರು, ಮೇರು ಭಾಗವತರುಗಳು ಇದ್ದಾರೆ. ಆದರೆ ಈ ಭಾಗ್ಯ ಕಣ್ತುಂಬಲು ಅವರಿಲ್ಲದಿರುವುದು ವಿಷಾದ. ಆದರೆ ಅವರ ಜನ್ಮದಿನದ ನೂರರ ಹೊತ್ತಿಗೆ ಸಂಸ್ಮರಣೆ ನಡೆಸಲು ಅವರ ಪೀಳಿಗೆ ಮುಂದಾಗಿರುವುದು ನಿಜವಾದ ಶ್ರದ್ಧಾಂಜಲಿ ಎಂದವರು ನುಡಿದರು.
ಕಾರ್ಯಕ್ರಮದಲ್ಲಿ ತೆಂಕುತಿಟ್ಟು ಯಕ್ಷಗಾನದ ಮೇರು ಹಿಮ್ಮೇಳವಾದಕರಾಗಿದ್ದು, ದಶಕದ ಹಿಂದೆಯೇ ಮೇಳದಿಂದ ಸ್ವಯಂನಿವೃತ್ತಿ ಪಡೆದ ಅಡೂರು ಮೋಹನ ಸರಳಾಯ ದಂಪತಿಯನ್ನು ಸನ್ಮಾನಿಸಿ ಗೌರವಿಸಲಾಯಿತು. ಕಣಿಪುರ ಯಕ್ಷಗಾನ ಮಾಸಪತ್ರಿಕೆಯ ಪ್ರಧಾನ ಸಂಪಾದಕ ಎಂ.ನಾ.ಚಂಬಲ್ತಿಮಾರ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಹಿರಿಯರ ಸ್ಮರಣೆಯೇ ಕಿರಿಯರ ಭವಿಷ್ಯದ ಸಾಧನೆಗೆ ಸ್ಪೂರ್ತಿ. ನಮ್ಮ ಮಣ್ಣಿನ ಸಾಧಕರನ್ನು ಮರೆಯದೇ ನೆನಪಿಸಿ ಮುಂದಿನ ಪೀಳಿಗೆಗೆ ಕೈದಾಟಿಸುವ ಕೆಲಸ ಈ ನೆಲದ ಪರಂಪರೆ ಕಾಪಾಡುವ ದೃಷ್ಟಿಯಲ್ಲಿ ಅತ್ಯಗತ್ಯ. ಅಡೂರು ಪರಿಸರದಲ್ಲಿ ಯಕ್ಷಗಾನ ಚಟುವಟಿಕೆಗಳನ್ನು ಸಕ್ರಿಯವಿರಿಸಲು ಪ್ರೋತ್ಸಾಹಿಸಿದ್ದ ಸೂರ್ಯನಾರಾಯಣ ಸರಳಾಯರ ಸಂಸ್ಮರಣೆ ಪ್ರತೀವರ್ಷವೂ ನಡೆಯುವಂತಾಗಬೇಕು ಎಂದು ಹಾರೈಸಿದರು.
ಶೇಣಿ ರಂಗಜಂಗಮ ಟ್ರಸ್ಟ್ ಸಂಚಾಲಕ, ಅರ್ಥಧಾರಿ ಶೇಣಿ ವೇಣುಗೋಪಾಲ ಭಟ್ ಅಧ್ಯಕ್ಷತೆ ವಹಿಸಿದರು. ಅಡೂರು ತಲ್ಪಚ್ಚೇರಿ ಮನೆಯ ಪರಮೇಶ್ವರ ಕಲ್ಲೂರಾಯ, ರಾಮಚಂದ್ರ ಕಲ್ಲೂರಾಯ, ಶಂಕರನಾರಾಯಣ ಕಲ್ಲೂರಾಯ, ಮಹಾದೇವ ಕಲ್ಲೂರಾಯ, ಶ್ರೀಪತಿ ಕಲ್ಲೂರಾಯ, ಶಾರದಾ ಭಟ್ ಕೊಡೆಂಕಿರಿ, ಗೀತಾ ಪುಣಿಂಚಿತ್ತಾಯ ಪೆರ್ಲ, ವೀಣಾ ಭಟ್ , ಭಾಗವತ ಸತ್ಯನಾರಾಯಣ ಪುಣಿಂಚಿತ್ತಾಯ ಉಪಸ್ಥಿತರಿದ್ದು, ಮಾತನಾಡಿದರು. ಇದೇ ಸಂದರ್ಭ ಯಕ್ಷಗಾನದಲ್ಲಿ ಡಾಕ್ಟರೇಟ್ ಪಡೆದ ಒಂದೇ ಮನೆಯ ಸಹೋದರರಾದ ಸತೀಶ, ಸತ್ಯನಾರಾಯಣಗ ಪುಣಿಂಚಿತ್ತಾಯರನ್ನು ಕುಟುಂಬದ ವತಿಯಿಂದ ಸನ್ಮಾನಿಸಲಾಯಿತು. ಶರ್ವಾಣಿ ಪ್ರಾರ್ಥನೆ ಹಾಡಿದರು. ಪುತ್ತೂರು ಜ್ಞಾನಗಂಗಾ ಪ್ರಕಾಶನದ ಪ್ರಕಾಶ ಕೊಡೆಂಕಿರಿ ಪ್ರಾಸ್ತಾವಿಕ ಮಾತನಾಡಿದರು. ಆಶಯ ಮಾತುಗಳೊಂದಿಗೆ ಡಾ. ಸತೀಶ ಪುಣಿಂಚಿತ್ತಾಯ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಶ್ರೀರಾಮ ನಿರ್ಯಾಣ ತಾಳಮದ್ದಳೆ ನಡೆಯಿತು. ಭಾಗವತಿಕೆಯಲ್ಲಿ ಡಾ.ಸತೀಶ ಪುಣಿಂಚಿತ್ತಾಯ, ಹಿಮ್ಮೇಳದಲ್ಲಿ ಅಡೂರು ಮೋಹನ ಸರಳಾಯ, ಪಡ್ರೆ ಶ್ರೀಧರ, ಸುಧೀಶ್ ಪಾಣಾಜೆ, ಮಾ. ಸಂಮೃದ್ಧ ಪುಣಿಂಚಿತ್ತಾಯ ಪಾಲ್ಗೊಂಡರು. ಅರ್ಥಧಾರಿಗಳಾಗಿ ಬೆಳ್ಳಿಗೆ ನಾರಾಯಣ ಮಣಿಯಾಣಿ, ಶೇಣಿ ವೇಣುಗೋಪಾಲ ಭಟ್, ನಾರಾಯಣ ಮಣಿಯಾಣಿ ಮೂಲಡ್ಕ, ಈಶ್ವರ ನಲ್ಕ ಪಾಲ್ಗೊಂಡರು.
ಪ್ರತಿಷ್ಠಾನ ರಚನೆಗೆ ನಿರ್ಧಾರ:
ಸಾಂಸ್ಕøತಿಕ ಸಾಧಕ ಅಡೂರು ಸೂರ್ಯನಾರಾಯಣ ಸರಳಾಯರ ಸ್ಮರಣಾರ್ಥ ಪ್ರತಿಷ್ಠಾನವೊಂದನ್ನು ರೂಪಿಸಿ, ಕುಟುಂಬದ ಸದಸದ್ಯರೆಲ್ಲರ ಪಾಲ್ಗೊಳ್ಳುವಿಕೆಯಲ್ಲಿ ವರ್ಷಂಪ್ರತಿ ಸಂಸ್ಮರಣೆ, ತಾಳಮದ್ದಳೆ ಇತ್ಯಾದಿ ಕಾರ್ಯಕ್ರಮಗಳನ್ನು ಏರ್ಪಡಿಸಲು ನಿರ್ಧರಿಸಲಾಗಿದೆ. ಅಲ್ಲದೇ ಅವರ ಸಾಧನೆಯನ್ನು ಮೆಲುಕಲು ಅವರ ಒಡನಾಡಿಗಳ ನೆನಪುಗಳನ್ನು ದಾಖಲಿಸುವ ಕಿರು ಹೊತ್ತಗೆ ಪ್ರಕಟಿಸಲು ಕೂಡಾ ಚಿಂತಿಸಲಾಗಿದೆ. ಸದಾ ಕ್ರಿಯಾಶೀಲತೆಯನ್ನೇ ನಡೆನುಡಿಯಾಗಿಸಿಕೊಂಡಿದ್ದ ಸರಳಾಯರು 2010 ಮೇ 24ರಂದು ತಮ್ಮ 90ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದರು.

