ಉಪ್ಪಳ: ಜಿಲ್ಲೆಯ ಅತೀ ಹಳೆಯ ರೈಲು ನಿಲ್ದಾಣಗಳಲ್ಲಿ ಒಂದಾದ, 110 ವರ್ಷಗಳಷ್ಟು ಹಳೆಯ ಉಪ್ಪಳ ರೈಲು ನಿಲ್ದಾಣದಲ್ಲಿ ಹಲವು ಊಹಾಪೋಪಗಳ ಮಧ್ಯೆ ಶನಿವಾರದಿಂದ ಬಹುಕಾಲದ ಬೇಡಿಕೆಯಾದ ಟಿಕೇಟ್ ಮುಂಗಡ ಕಾಯ್ದಿರಿಸುವ (ರಿಸರ್ವೇಶನ್)ಯೋಜನೆಗೆ ಶನಿವಾರ ಅಧಿಕೃತ ಚಾಲನೆ ನೀಡುವುದರೊಂದಿಗೆ ನಿಲ್ದಾಣದ ಬಗೆಗಿನ ಒಂದು ಹಂತದ ಬೇಡಿಕೆ ಈಡೇರಿದಂತಾಗಿದೆ.
ಕಳೆದ ಹಲವು ದಶಕಗಳಿಂದ ಯಾವುದೇ ಅಭಿವೃದ್ದಿ ಚಟುವಟಿಕೆಗಳಿಲ್ಲದೆ ಮುಚ್ಚಲಾಗುವ ಹಂತಕ್ಕೆ ಬಂದಿರುವ ಉಪ್ಪಳ ರೈಲು ನಿಲ್ದಾಣದ ಅಭಿವೃದ್ದಿಗೆ ಜನಪರ ಕ್ರಿಯಾ ಸಮಿತಿ ಎರಡು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿತ್ತು. ಕ್ರಿಯಾ ಸಮಿತಿಯ ನಿರಂತರ ಹೋರಾಟದ ಫಲವಾಗಿ ನಿಲ್ದಾಣ ಮೂಲ ಸೌಕರ್ಯಗಳ ನಿರ್ವಹಣೆಯಲ್ಲಿ ಚೇತರಿಸುವ ಆಶಾಭಾವನೆ ವ್ಯಕ್ತವಾಗುತ್ತಿರುವಂತೆ ಟಿಕೇಟ್ ಮುಂಗಡ ಕಾಯ್ದಿರಿಸುವ ಯೋಜನೆ ಜಾರಿಗೊಳ್ಳುತ್ತಿರುವಂತೆ ಮತ್ತೆ ಅಭಿವೃದ್ದಿಯ ಕನಸು ಚಿಗುರೊಡೆದಿದೆ.
ಇದೀಗ ಮಂಗಳೂರು ಮತ್ತು ಕಾಸರಗೋಡಲ್ಲಿ ಮಾತ್ರ ಟಿಕೇಟ್ ಕಾಯ್ದಿರುವ ಸೌಕರ್ಯಗಳಿದ್ದು, ಈ ಎರಡೂ ವ್ಯಾಪ್ತಿಯ ಮಧ್ಯೆ ಉಪ್ಪಳ ರೈಲು ನಿಲ್ಧಾಣದಲ್ಲಿ ವಿನೂತನ ವ್ಯವಸ್ಥೆ ಜಾರಿಗೊಳ್ಳುತ್ತಿರುವಂತೆ ಆಶಾಭಾವನೆ ವ್ಯಕ್ತವಾಗಿದೆ. ಪ್ರಸ್ತುತ ಶನಿವಾರ ಆರಂಭಗೊಂಡ ಕಾಯ್ದಿರಿಸುವ ವ್ಯವಸ್ಥೆಯಂತೆ ಇಲ್ಲಿ ಬೆಳಿಗ್ಗೆ 8 ರಿಂದ 9.30ರ ತನಕ ಮತ್ತು ಸಂಜೆ 5 ರಿಂದ 7ರ ವರೆಗೆ ಸೌಕರ್ಯ ಲಭ್ಯವಾಗಲಿದೆ.
ಸೇವ್ ಉಪ್ಪಳ ರೈಲ್ವೇ ಸ್ಟೇಶನ್ ಕ್ರಿಯಾ ಸಮಿತಿ, ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಮತ್ತು ಮಾನವ ಹಕ್ಕು ಸಂರಕ್ಷಣಾ ಸಮಿತಿ ಉಪ್ಪಳ ಘಟಕದ ಸಂಯುಕ್ತ ಚಟುವಟಿಕೆಗಳ ಫಲವಾಗಿ ನಿಲ್ದಾಣದ ಉನ್ನತೀಕರಣಕ್ಕೆ ಕಾರಣವಾಗುತ್ತಿದೆ. ಶನಿವಾರ ಬೆಳಿಗ್ಗೆ ಮೊದಲ ಕಾಯ್ದಿರಿಸಿದ ಟಿಕೇಟ್ ನ್ನು ಸೇವ್ ಉಪ್ಪಳ ರೈಲು ನಿಲ್ದಾಣ ಕ್ರಿಯಾ ಸಮಿತಿಯ ಕಾರ್ಯದರ್ಶಿ ಮೊಹಮ್ಮದ್ ಅಝೀಂ ಮಣಿಮುಂಡ ಅವರು ಪಡೆದುಕೊಂಡು ಚಾಲನೆ ನೀಡಿದರು. ಸಮಿತಿ ಅಧ್ಯಕ್ಷ ನ್ಯಾಯವಾದಿ ಬಾಲಕೃಷ್ಣ ಶೆಟ್ಟಿ, ವ್ಯಾಪಾರಿ ಸಮಿತಿ ನೇತಾರ ಮೊಹಮ್ಮದ್ ರಫೀಕ್ ಕೆ.ಐ., ಮುಖಂಡರಾದ ಕೆ.ಅಲಿ ಮಾಸ್ತರ್, ನಾಫಿ ಬಪ್ಪಾಯಿತೊಟ್ಟಿ, ಮೊಹಮ್ಮದ್ ಕೈಕಂ, ಯು.ಎಂ.ಭಾಸ್ಕರ, ಅಬ್ದುಲ್ ಜಬ್ಬಾರ್ ಮೊದಲಾದವರು ರೈಲ್ವೇ ನಿಲ್ದಾಣದ ಅಧಿಕಾರಿ ರತ್ನಜಿತ್ ಅವರನ್ನು ಈ ಸಂದರ್ಭ ಅಭಿನಂದಿಸಿದರು.

