ಕೊಚ್ಚಿ: ಕರೊನಾ ಭೀತಿಯ ಮಧ್ಯೆ ಕೇರಳದಲ್ಲಿ ಹಕ್ಕಿಜ್ವರ ತಲೆದೋರಿದ್ದು, ಜನತೆ ಮತ್ತಷ್ಟು ಆತಂಕಕ್ಕೊಳಗಾಗಿದ್ದಾರೆ.ಕೋಯಿಕ್ಕೋಡಿನ ವೆಙರ ಮತ್ತು ಕೋಡಿಯತ್ತೂರಿನ ಕೋಳಿ ಸಾಕಣಾ ಕೇಂದ್ರದಲ್ಲಿ ಪಕ್ಷಿಜ್ವರ ಕಾಣಿಸಿಕೊಂಡಿದ್ದು, ಇದನ್ನು ತಜ್ಞರೂ ಖಚಿತಪಡಿಸಿರುವುದಾಗಿ ರಾಜ್ಯ ಅರಣ್ಯ ಮತ್ತು ಮೃಗಸಂರಕ್ಷಣಾ ಖಾತೆ ಸಚಿವ ರಾಜು ಸ್ಪಷ್ಟಪಡಿಸಿದ್ದಾರೆ.
ಪಕ್ಷಿಜ್ವರ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ವೆಙರ ಮತ್ತು ಕೋಡಿಯತ್ತೂರ್ ಆಸುಪಾಸಿನ ಒಂದು ಕಿ.ಮೀ ವ್ಯಾಪ್ತಿಯಲ್ಲಿರುವ ಸಾಕು ಕೋಳಿಗಳನ್ನು ಹಾಗೂ ಕೋಳಿ ಮೊಟ್ಟೆಗಳನ್ನು ನಾಶಗೊಳಿಸಲು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶನಿವಾರ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ರೋಗಪತ್ತೆಯಾಗಿರುವ ಪ್ರದೇಶದಿಂದ ಒಂದು ಕಿ.ಮೀ ವ್ಯಾಪ್ತಿಯನ್ನು ರೋಗಬಾಧಿತ ವಲಯ(ಇನ್‍ಫೆಕ್ಟೆಡ್ ಏರಿಯಾ) ಹಾಗೂ ಒಂಬತ್ತು ಕಿ.ಮೀ ವ್ಯಾಪ್ತಿಯನ್ನು ನಿಗಾ ವಲಯ(ಸರ್ವೈಲನ್ಸ್ ಏರಿಯ)ಎಂದು ಜಿಲ್ಲಾಡಳಿತ ಘೋಷಿಸಿದ್ದು, ಈ ಪ್ರದೇಶದಲ್ಲಿ ಮಾಂಸದ ಕೋಳಿ ಸಹಿತ ಸಾಕು ಪಕ್ಷಿಗಳ ಗಣತಿ ಆರಂಭಿಸಲಾಗಿದೆ. ಈಗಾಗಲೇ ಲಭ್ಯವಿರುವ ಸುರಕ್ಷಾ ಕಿಟ್‍ಗಳನ್ನು ಸ್ಥಳಕ್ಕೆ ರವಾನಿಸಲಾಗಿದ್ದು, ಇನ್ನೂ 5ಸಾವಿರ ಕಿಟ್‍ಗಳನ್ನು ತರಿಸಿಕೊಳ್ಳಲು ಜಿಲ್ಲಾಡಳಿತ ತೀರ್ಮಾನಿಸಿದೆ. ಏವಿಯನ್ ಇನ್‍ಪ್ಲುಯೆನ್ಸ್ ಎಂದು ಗುರುತಿಸಲ್ಪಟ್ಟಿರುವ ಪಕ್ಷಿಜ್ವರ ಅಪೂರ್ವ ಸನ್ನಿವೇದಲ್ಲಿ ಮನುಷ್ಯರಿಗೆ ಬಾಧಿಸಲಿರುವುದಾಗಿ ತಜ್ಞರು ತಿಳಿಸಿದ್ದಾರೆ.
ಭೋಪಾಲಿನ ನ್ಯಾಶನಲ್ ಇನ್ಸ್‍ಟ್ಯೂಟ್ ಫಾರ್ ಹೈ ಸಎಕ್ಯೂರಿಟಿ ಫಾರ್ ಎನಿಮಲ್ ಡಿಸೀಸ್‍ನಲ್ಲಿ ನಡೆದ ತಪಾಸಣೆಯಲ್ಲಿ ರೋಗ ಖಚಿತಪಡಿಸಲಾಗಿದೆ. ಹಕ್ಕಿಜ್ವರ ನಿಯಂತ್ರಣಕ್ಕಾಗಿ 24ತಾಸು ಕಾಲ ಚಟುವಟಿಕೆ ನಡೆಸುವ ಕೇಂದ್ರ ತೆರೆಯಲಾಗಿದೆ. ಈ ಬಗ್ಗೆ ಯಾರೂ ಆತಂಕಕ್ಕೆ ಒಳಗಾಗಬೇಕಿಲ್ಲ ಎಂದು ಸಚಿವ ರಾಜು ತಿಳಿಸಿದ್ದಾರೆ.


