ಕುಂಬಳೆ: ಪ್ರಸ್ತುತ ವರ್ಷ ಏಳನೇ ತರಗತಿ ತನಕದ ವಾರ್ಷಿಕ ಪರೀಕ್ಷೆಯನ್ನು ಹೊರತುಪಡಿಸಿರುವ ಹಿನ್ನೆಲೆಯಲ್ಲಿ ಓಣಂ ಮತ್ತು ಕ್ರಿಸ್ಮಸ್ ಪರೀಕ್ಷೆಗಳಲ್ಲಿ ಲಭಿಸಿದ ಸರಾಸರಿ ಅಂಕಗಳ ಆಧಾರದಲ್ಲಿ ವಿದ್ಯಾರ್ಥಿಗಳ ಗ್ರೇಡ್ ನಿರ್ಣಯಿಸಲು ರಾಜ್ಯ ಶಿಕ್ಷಣ ಇಲಾಖೆ ತೀರ್ಮಾನಿಸಿದೆ.
ಎಂಟನೆ ತರಗತಿ ತನಕ ವಿದ್ಯಾರ್ಥಿಗಳನ್ನು ಅನುತ್ತೀರ್ಣಗೊಳಿಸಬಾರದೆಂಬ ನಿಬಂಧನೆಯನ್ನು ಈ ವರ್ಷವೂ ಪಾಲಿಸುವ ತೀರ್ಮಾನವನ್ನು ಇಲಾಖೆ ಕೈಗೊಂಡಿದೆ.
ಆರೋಗ್ಯ ಪರವಾದ ಕಾರಣಗಳಿಂದ ಒಂದರಿಂದ ಏಳನೇ ತರಗತಿಯ ವರೆಗಿನ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆ ಬರೆಯಲು ಸಾಧ್ಯವಾಗದಿದ್ದಲ್ಲಿ, ಓಣಂ ಮತ್ತು ಕ್ರಿಸ್ಮಸ್ ಪರೀಕ್ಷೆಗಳ ಅಂಕಗಳನ್ನು ಪರಿಗಣಿಸಿ ಅವರಿಗೆ ಗ್ರೇಡ್ ನೀಡುವ ಸಂಪ್ರದಾಯ ರಾಜ್ಯದಲ್ಲಿ ಜಾರಿಯಲ್ಲಿದೆ. ಈ ಮಾನದಂಡವನ್ನು ಪ್ರತೀ ವರ್ಷ ಪಾಲಿಸಲಾಗುತ್ತಿದೆ. ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ಭೀತಿಯಿಂದಾಗಿ ಈ ವರ್ಷ ಒಂದನೇ ತರಗತಿಯಿಂದ ಏಳನೇ ತರಗತಿ ತನಕದ ಎಲ್ಲಾ ವಾರ್ಷಿಕ ಪರೀಕ್ಷೆಗಳನ್ನು ರಾಜ್ಯ ಸರ್ಕಾರ ರದ್ದ್ಪುಡಿಸಿದೆ. ಮಾತ್ರವಲ್ಲದೆ ಶಾಲೆಗಳಿಗೂ ರಜೆ ಘೋಷಿಸಲಾಗಿದೆ.


