ಕಾಸರಗೋಡು: ಉದಯಗಿರಿಯಲ್ಲಿ ಕಟ್ಟಡ ನಿರ್ಮಾಣಕಾರ್ಯ ಅಂತಿಮಹಂತದಲ್ಲಿರುವ ಕೆ.ಡಿ.ಪಿ. ಉದ್ಯೋಗಿ ಮಹಿಳೆಯರ ಹಾಸ್ಟೆಲ್ ಉದ್ಘಾಟನೆಗೆ ಸಿದ್ಧವಾಗಿದೆ. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಮೂಲಕ 5 ಕೋಟಿ ರೂ.ವೆಚ್ಚದಲ್ಲಿ ಈ ಹಾಸ್ಟೆಲ್ ನಿರ್ಮಿಸಲಾಗಿದೆ. ಏಕಕಾಲಕ್ಕೆ 120 ಮಂದಿಗೆ ವಸತಿ ಸೌಲಭ್ಯಹೊಂದಿರುವ ಈ ಹಾಸ್ಟೆಲ್‍ನಲ್ಲಿ 24 ತಾಸುಗಳ ಸೆಕ್ಯೂರಿಟಿ ಸೌಲಭ್ಯ, ಸಿ.ಸಿ.ಟಿ.ವಿ.ಸೌಲಭ್ಯ, ವಿಶಾಲ ಗ್ರಂಥಾಲಯ, ಕಲಿಕಾ ಕೊಠಡಿ, ಪ್ರತ್ಯೇಕ ಯೋಗ ತರಬೇತಿ ಸೌಲಭ್ಯ, ಎಲ್.ಇ.ಡಿ.ಪ್ರಾಜೆಕ್ಟರ್ ಸಹಿತ ಸಭಾಂಗಣ, ಡೈನಿಂಗ್ ಹಾಲ್ ಹೀಗೆ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಈ ಹಾಸ್ಟೆಲ್ ನಿರ್ಮಾಣಗೊಂಡಿದೆ. ಕಿರು ಉದ್ಯಾನ, ಹೂದೋಟ, ಗ್ರಿಡ್ ಕೇಂದ್ರಿತ ಸೌರಶಕ್ತಿ ಪ್ಯಾನೆಲ್ ಗಳ ಸಹಿತಸೌಕರ್ಯಗಳನ್ನು ಹಾಸ್ಟೆಲ್ ಬಳಿಸ್ಥಾಪಿಸಲಾಗಿದೆ. ಅವಳಿ ಕಟ್ಟಡ(ಟ್ವಿನ್ ಬಿಲ್ಡಿಂಗ್) ಮಾದರಿಯಲ್ಲಿ ನಿರ್ಮಾಣಗೊಂಡಿರುವ ಹಾಸ್ಟೆಲ್‍ನಲ್ಲಿ ಕುಟುಂಬಶ್ರೀಯ ಪ್ರತ್ಯೇಕ ತರಬೇತಿ ಲಭಿಸಿದ,ಪೂರ್ಣಾವಧಿ ಚಟುವಟಿಕೆ ನಡೆಸುವ ಕ್ಯಾಂಟೀನ್ ಸಜ್ಜುಗೊಳಿಸಲಾಗಿದೆ. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ಅಧ್ಯಕ್ಷರಾಗಿರುವ, ಜಿಲ್ಲಾ ಮಹಿಳಾ ಶಿಶು ಅಧಿಕಾರಿ ಸಂಚಾಲಕರಾಗಿರುವ ಸಮಿತಿ ಹಾಸ್ಟೆಲ್ ನ ಮೇಲ್ನೋಟ ವಹಿಸುತ್ತಿದೆ. ಇಬ್ಬರಿಗೆ ಮತ್ತು ಮೂವರಿಗೆ ವಾಸಿಸಬಹುದಾದ ಕೊಠಡಿಗಳು ಇಲ್ಲಿ ನಿರ್ಮಾಣಗೊಂಡಿವೆ. ಸರ್ಕಾರಿ,ಖಾಸಗಿ ಸಂಸ್ಥೆಗಳ ಸಿಬ್ಬಂದಿ, ವಿದ್ಯಾರ್ಥಿನಿಯರು ಇಲ್ಲಿ ಸೇರ್ಪಡೆಗೊಳ್ಳುವ ನಿಟ್ಟಿನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಫಾರಂ ಜಿಲ್ಲಾಧಿಕಾರಿ ಕಚೇರಿಯ ಎಂ ವಿಭಾಗದಲ್ಲಿ ಲಭ್ಯವಿದೆ.
ಅಭಿಮತ:
ನೌಕರಿಯಲ್ಲಿರುವ ಮಹಿಳೆಯರಿಗೆ, ವಿದ್ಯಾರ್ಥಿನಿಯರಿಗೆ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ನಡೆಸಲಾಗುತ್ತಿರುವ ಕ್ರಮಗಳಲ್ಲಿ ಕೆ.ಡಿ.ಪಿ. ವಕಿರ್ಂಗ್ ವುಮನ್ ಹಾಸ್ಟೆಲ್ ನಿರ್ಮಾಣವೂ ಒಂದಾಗಿದೆ. ಇಲ್ಲಿ ಮಹಿಳೆಯರಿಗಾಗಿ ಜಾಗೃತಿ ತರಗತಿ ಇತ್ಯಾದಿ ನಡೆಸುವ ಸೌಲಭ್ಯಗಳನ್ನೂ ಏರ್ಪಡಿಸಲಾಗಿದೆ.
ಡಾ.ಡಿ.ಸಜಿತ್ ಬಾಬು, ಜಿಲ್ಲಾಧಿಕಾರಿ,
ಕಾಸರಗೋಡು.





