ಕುಂಬಳೆ: ವಿಶ್ವಬ್ರಾಹ್ಮಣ ಸಮಾಜದ ಕಾರ್ಳೆ ಶ್ರೀಕಾಳಿಕಾಂಬ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಭಕ್ತ ಸಮೂಹದ ನೇತೃತ್ವದಲ್ಲಿ ವಿವಿದೆಡೆಗಳಿಂದ ಹರಿದು ಬಂದ ಹೊರೆ ಕಾಣಿಕೆ ಮೆರವಣಿಗೆ ಉಗ್ರಾಣವನ್ನು ಹಸಿರಾಗಿ ಇರಿಸಿದೆ.
ಗುರುವಾರ ಸಂಜೆ ಕುಂಬಳೆಯ ಕೃಷ್ಣ ನಗರದ ಶ್ರೀ ಮೌನೇಶ ಮಂದಿರದಿಂದ ಹೊರಟ ಹಸಿರುವಾಣಿ ಹೊರೆ ಕಾಣಿಕೆ ಮೆರವಣಿಗೆಗೆ ವಿವಿಧೆಡೆಯ ಭಕ್ತ ಜನತೆ ಅಕ್ಕಿ,ತೆಂಗಿನಕಾಯಿ,ಬಾಳೆ ಎಲೆ,ಬಾಳೆಗೊನೆ,ಸೀಯಾಳ,ಅಡಿಕೆ,ತರಕಾರಿ,ಹೂ ಹಾಗೂ ಇನ್ನಿತರ ಸುವಸ್ತುಗಳನ್ನು ಸಮರ್ಪಿಸುವ ಮೂಲಕ ಕೃತಾರ್ಥರಾದರು. ವಾದ್ಯಘೋಷ,ಚೆಂಡೆ ಮೇಳ,ಮುತ್ತುಕೊಡೆಗಳೊಂದಿಗೆ ವರ್ಣಮಯವಾಗಿ ಆರಂಭಗೊಂಡ ಹಸಿರುವಾಣಿ ಹೊರೆ ಕಾಣಿಕೆ ಮೆರವಣಿಗೆಗೆ ಕುಂಬಳೆ, ಮಂಜೇಶ್ವರ, ಕೋಟೆಕ್ಕಾರ್, ಕಾಸರಗೋಡು,ಬದಿಯಡ್ಕ,ಪೆರ್ಲ, ಪುತ್ತೂರು, ವಿಟ್ಲ ಮೊದಲಾದ ಭಾಗದ ಭಕ್ತ ಜನ ಸಮೂಹ ಪಾಲ್ಗೊಳ್ಳುವ ಮೂಲಕ ಕಳೆ ಏರಿಸಿದರು. ವಿವಿಧ ಕಡೆಯ ಜನರು ವಾಹನಗಳಲ್ಲಿ ಹಸಿರುವಾಣಿಯೊಂದಿಗೆ ಆಗಮಿಸಿದ್ದರು. ವಿಶ್ವ ಬ್ರಾಹ್ಮಣ ಸಮಾಜದ ವಿವಿಧ ಮುಖಂಡರು ಮೆರವಣಿಗೆಯಲ್ಲಿ ಪಾಲ್ಗೊಂಡರು. ಬ್ರಹ್ಮಕಲಶೋತ್ಸವ ಸಮಿತಿ,ಕ್ಷೇತ್ರಾಭಿವೃದ್ಧಿ ಸಮಿತಿ, ಯುವಕ ಸಂಘ,ಮಾತೃ ಸಂಘಗಳು ಮೆರವಣಿಗೆಗೆ ನೇತೃತ್ವ ನೀಡಿದವು.


