ಕಾಸರಗೋಡು: ಚೆರ್ಕಳ-ಕಲ್ಲಡ್ಕ ರಾಜ್ಯ ಹೆದ್ದಾರಿ ಚೆರ್ಕಳದಿಂದ ಅಡ್ಕಸ್ಥಳ ವರೆಗೆ ಮೆಕ್ಕಡಾಂ ಡಾಂಬರೀಕರಣ ಪ್ರಗತಿಯಲ್ಲಿದ್ದು, ರಸ್ತೆಯ ಹಲವು ವರ್ಷಗಳ ಶಿಥಿಲಾವಸ್ಥೆಗೆ ಕೊನೆಗಾಣುವ ಸಾಧ್ಯತೆ ಸಮೀಪಿಸುತ್ತಿದೆ.ಚೆರ್ಕಳದಿಂದ ಅಡ್ಕಸ್ಥಳ ವರೆಗಿನ 30 ಕಿ.ಮೀ ದೂರದ ರಸ್ತೆಯನ್ನು ಅಗಲಗೊಳಿಸಿ, ಮೆಕ್ಕಡಾಂ ಡಾಂಬರೀಕರಣ ನಡೆಸುವ ನಿಟ್ಟಿನಲ್ಲಿ 67.15ಕೋಟಿ ರೂ. ವೆಚ್ಚಮಾಡಲಾಗುತ್ತಿದೆ. ಚೆರ್ಕಳದಿಂದ ಉಕ್ಕಿನಡ್ಕ ವರೆಗಿನ 20ಕಿ.ಮೀ ರಸ್ತೆ ಹಾಗೂ ಉಕ್ಕಿನಡ್ಕದಿಂದ ಅಡ್ಕಸ್ಥಳ ವರೆಗಿನ ಹತ್ತು ಕಿ.ಮೀ ರಸ್ತೆ ಅಭಿವೃದ್ಧಿಗೆ ಎರಡು ಪ್ರತ್ಯೇಕ ಟೆಂಡರ್ ನಡೆಸಲಾಗಿದ್ದು, ಎರಡೂ ಕೆಲಸಗಳೂ ಏಕ ಕಾಲಕ್ಕೆ ನಡೆಯುತ್ತಿದೆ. ಚೆರ್ಕಳದಿಂದ ಉಕ್ಕಿನಡ್ಕ ವರೆಗೆ 39.76ಕೋಟಿ, ಉಕ್ಕಿನಡ್ಕದಿಂದ ಅಡ್ಕಸ್ಥಳ ವರೆಗೆ 27.39ಕೋಟಿ ರೂ. ಮೀಸಲಿರಿಸಲಾಗಿದೆ.
ರಸ್ತೆಕಾಮಗಾರಿಗಾಗಿ ಭಾರಿ ಗಾತ್ರದ ಮರಗಳೂ ಧರಾಶಾಯಿಯಾಗಿದೆ. ಪೆರ್ಲದ ಮೇಲಿನ ಪೇಟೆಯಲ್ಲಿದ್ದ ಬೃಹತ್ ದೇವದಾರು ಮರವೂ ನೆಲಕ್ಕುರುಳಿದೆ. ರಸ್ತೆ ಅಂಚಿಗಿದ್ದ ಬೃಹತ್ ಮರಗಳು ನಾಶವಾಗಿದ್ದು, ಅಂಚಿಗೆ ಸಾಲು ವೃಕ್ಷಗಳನ್ನು ನೆಟ್ಟು ಬೆಳೆಸುವಂತೆ ಜನರ ಆಗ್ರಹ ಹೆಚ್ಚಾಗಿದೆ. ಪೆರ್ಲ ಪೇಟೆಯಲ್ಲಿ ರಸ್ತೆಕಾಮಗಾರಿ ಬಿರುಸಿನಿಂದ ಸಾಗುತ್ತಿದ್ದರೂ, ಸುಸಜ್ಜಿತ ಒಳಚರಂಡಿ ನಿರ್ಮಾಣವೂ ಅಷ್ಟೇ ಅಗತ್ಯವಿದೆ. ಸಣ್ಣ ಮಳೆಗೂ ಭಾರಿ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು, ಚರಂಡಿವ್ಯವಸ್ಥೆಯಿಲ್ಲದಿರುವುದರಿಂದ ರಸ್ತೆಯಲ್ಲೇ ಮಲಿನ ನೀರು ಹರಿಯಲು ಕಾರಣವಾಗಿತ್ತು. ಹೊಸ ಯೋಜನೆಯನ್ವಯ ಸಮಗ್ರ ಚರಂಡಿಯೋಜನೆ ಜಾರಿಯಾಗುವ ನಿರೀಕ್ಷೆಯಿದೆ.
ಉಕ್ಕಿನಡ್ಕದಿಂದ ಅಡ್ಕಸ್ಥಳ ವರೆಗಿನ ಕಾಮಗಾರಿಯಲ್ಲಿ ಗೋಳಿತ್ತಡ್ಕ ಪ್ರದೇಶದಲ್ಲಿ ಸುಮಾರು 250ಮೀ. ರಸ್ತೆ ಕಾಮಗಾರಿ ನಡೆಸದೆ ಹಾಗೇ ಉಳಿಸಲಾಗಿದೆ. ಇಲ್ಲಿ ಲೋಕೋಪಯೋಗಿ ಇಲಾಖೆ ಮತ್ತು ಖಾಸಗಿ ವ್ಯಕ್ತಿಗಳ ನಡುವಿನ ತರ್ಕವೊಂದು ಕಾಮಗಾರಿ ವಿಳಂಬಕ್ಕೆ ಕಾರಣವಾಗುತ್ತಿದೆ. ರಸ್ತೆಅಭಿವೃದ್ಧಿ ಕಾಮಗಾರಿಗೆ ಲೋಕೋಪಯೋಗಿ ಇಲಾಖೆಯ ಈ ಜಾಗವನ್ನು ವಶಪಡಿಸಿಕೊಂಡು ಅಲ್ಲಿ ಉಳಿದೆಡೆ ನಡೆಸಿರುವಂತೆ ಸಮಗ್ರ ಅಭಿವೃದ್ಧಿಕಾರ್ಯ ಕೈಗೆತ್ತಿಕೊಳ್ಳುವಂತೆ ನಾಗರಿಕರೂ ಆಗ್ರಹಿಸಿದ್ದಾರೆ.
ಕಳೆದ ಹಲವಾರು ವರ್ಷಗಳಿಂದ ನಡೆಸಿದ ಹೋರಾಟದ ಫಲವಾಗಿ ಶಿಥಿಲಾವಸ್ಥೆಯಲ್ಲಿದ್ದ ಅಡ್ಕಸ್ಥಳ-ಚೆರ್ಕಳ ರಸ್ತೆಯ ಅಭಿವೃದ್ಧಿಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಪೆರ್ಲ ಪೇಟೆಯಲ್ಲಿ ಸಮಗ್ರ ಒಳಚರಂಡಿ ಯೋಜನೆ ಜತೆಗೆ ಗೋಳಿತ್ತಡ್ಕದಲ್ಲಿ ಬಾಕಿ ಉಳಿಸಿರುವ ಕಾಮಗಾರಿ ಪೂರ್ತಿಗೊಳಿಸಲೂ ಇಲಾಖೆ ಅಗತ್ಯ ಕ್ರಮ ಕೈಗೊಳ್ಳುವಂತೆ ನಾಗರಿಕರು ಆಗ್ರಹಿಸಿದ್ದಾರೆ.
ಅಭಿಮತ:
ಗೋಳಿತ್ತಡ್ಕದಲ್ಲಿ ರಸ್ತೆಗೆ ಬಂಧಪಟ್ಟ ತಕರಾರು ಬಗೆಹರಿಸಿಕೊಂಡು ಬಾಕಿ ಉಳಿದಿರುವ ಕೆಲಸವನ್ನೂ ಜತೆಯಾಗಿ ನಡೆಸಲಾಗುವುದು. ಈ ಮಧ್ಯೆ ರಸ್ತೆ ಅಂಚಿಗಿರುವ ವಿದ್ಯುತ್‍ಕಂಬ, ನೀರಿ ಪೈಪು ಸ್ಥಳಾಂತರಿಸುವ ಪ್ರಕ್ರಿಯೆಯೂ ಪ್ರಗತಿಯಲ್ಲಿದೆ. ಸೂಕ್ತ ಚರಂಡಿ ವ್ಯವಸ್ಥೆಯನ್ನೂ ನಡೆಸಲಾಗುವುದು.
ಮಹೇಶ್, ಸಹಾಯಕ ಅಭಿಯಂತ,
ಲೋಕೋಪಯೋಗಿ ಇಲಾಖೆ ಬದಿಯಡ್ಕ ವಿಭಾಗ


