ಕುಂಬಳೆ: ವಾಣಿಯ-ಗಾಣಿಗ ಸಮುದಾಯದ ಪ್ರಸಿದ್ದ ಆರಾಧನಾ ಕೇಂದ್ರವಾದ ಸೀತಾಂಗೋಳಿ ಸಮೀಪದ ಶ್ರೀಪೆರ್ಣೆ ಮುಚ್ಚಿಲೋಟ್ ಭಗವತೀ ಕ್ಷೇತ್ರದ ನವೀಕರಣ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮಾ.15 ರಿಂದ ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಶ್ರದ್ದಾ ಭಕ್ತಿಯಿಂದ ಆರಂಭಗೊಂಡಿದ್ದು, ಭಾನುವಾರ ವಿವಿಧ ಪ್ರದೇಶಗಳಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ನೂರಾರು ಸಂಖ್ಯೆಯ ಭಕ್ತರೊಂದಿಗೆ ಆಗಮಿಸಿತ್ತು.
ಈ ಸಂದರ್ಭ ಗಂಭೀರ ಆತಂಕಕ್ಕೆ ಕಾರಣವಾದ ಕೊರೊನಾ ವೈರಸ್ ಮುಂಜಾಗ್ರತಾ ಕ್ರಮವಾಗಿ ಸರ್ಕಾರ ಹೊರಡಿಸಿದ ನಿಬಂಧನೆಗಳಂತೆ ಕ್ಷೇತ್ರ ಸಮಿತಿಯ ಸಂಬಂಧಪಟ್ಟವರು ತಕ್ಷಣ ಭಕ್ತರನ್ನು ತೆರವುಗೊಳಿಸಿ ಕಾನೂನು ಪಾಲನೆಯಲ್ಲಿ ಮಾದರಿಯಾದರು.
ಕೊರೊನಾ ಮುಂಜಾಗ್ರತಾ ಕ್ರಮವಾಗಿ ಮುಂದಿನ ದಿನಗಳಲ್ಲಿ ಕ್ಷೇತ್ರ ಸಂದರ್ಶನಕ್ಕೆ ಭಕ್ತರಿಗೆ ಕಡಿವಾಣ ಏರ್ಪಡಿಸಲಾಗಿದೆ. ರೋಗ ಜಾಗೃತಿಯ ಬಗ್ಗೆ ಮುಖ ಕವಚ ಧರಿಸುವಂತೆ ಧ್ವನಿ ವರ್ಧಕದ ಮೂಲಕ ಆಗಾಗ ಸೂಚನೆ ನೀಡಲಾಗುತ್ತಿದೆ. ಸರ್ಕಾರದ ಆದೇಶವನ್ನು ಸಮರ್ಪಕವಾಗಿ ಪಾಲಿಸಿದ ಕ್ಷೇತ್ರ ಆಡಳಿತ ಸಮಿತಿಯ ಜೊತೆಗೆ ಭಕ್ತರ ಕ್ರಮಗಳು ಶ್ಲಾಘನೆಗೊಳಗಾಗಿದೆ.


