ಪೆರ್ಲ: ಕೆಲವೊಂದು ಆಚರಣೆಗಳು ಸಂಪ್ರದಾಯಿಕವಾಗಿ ಸಂಪನ್ನಗೊಳ್ಳುವುದರ ಜತೆಗೆ ಸಾಂಸ್ಕøತಿಕವಾಗಿಯೂ ತನ್ನ ಐತಿಹ್ಯವನ್ನು ಸಾಂಕೇತಿಸುವುದಲ್ಲದೆ ನಾಡಿನ ಸುಭಿಕ್ಷೆಗೂ ಕಾರಣವಾಗುವುದಿದೆ. ಅಂತಹ ಒಂದು ಆರಾಧನಾ ವೈಶಿಷ್ಟತೆಯಾಗಿದೆ ಬಾಲೆಸಾಂತ್ ಎಂಬ ಜನಪದ ಆಚರಣೆ.
ಆದಿವಾಸಿ ಗೋತ್ರ ಜನಾಂಗವಾದ ಮರಾಟಿ ಸಮುದಾಯದವರು ನಡೆಸುವ ಬಾಲೆಸಾಂತ್ ಎಂಬ ಆರಾಧನಾ ಕಲೆ ನಾಡಿನ ನಲ್ಮೆಗೆ ಪಾತ್ರವಾಗಿರುವುದು ಇಲ್ಲಿ ವೇದ್ಯವಾಗಿದೆ. ಕೇರಳ-ಕರ್ನಾಟಕ ಗಡಿ ಪ್ರದೇಶವಾದ ಅಡ್ಯನಡ್ಕ ಸಮೀಪದ ಎರುಗಲ್ಲಿನ ಗದ್ದೆಯೊಂದರಲ್ಲಿ ಇಂತಹ ಸಾಮುದಾಯಿಕ ಆಚರಣೆಯೊಂದು ಕಳೆದ ಏಳು ದಶಕಗಳಿಂದ ನಡೆಯುತ್ತಾ ಬರುತ್ತಿದ್ದು ಈ ನಾಡಿನ ಜನತೆಯ ಭಕ್ತಿ ಭಾವೈಕ್ಯತೆಗೆ ಕಾರಣವಾಗಿದೆ.
ಸಾರ್ವಜನಿಕ ಆಚರಣೆಯ ವಿಶೇಷತೆ:
ಪರಿಶಿಷ್ಟ ವರ್ಗದ ಆದಿವಾಸಿ ಜನಾಂಗವಾದ ಮರಾಟಿ ಸಮುದಾಯದ ಸಂಪ್ರದಾಯಿಕ ಆರಾಧನೆಯೊಂದು ಇಲ್ಲಿ ಸಾರ್ವಜನಿಕವಾಗಿ ಆಚರಿಸಲ್ಪಡುವುದರ ಹಿಂದೆ ಇಲ್ಲಿನ ಜಾತಿ ಸೌಹರ್ದತೆಯ ಜತೆಗೆ ನಾಡಿನ ಜನತೆಯ ಭಕ್ತಿ ನಿದರ್ಶನಕ್ಕೆ ಸಂಬಂಧಪಟ್ಟ ಐತಿಹ್ಯಗಳು ಉಲ್ಲೇಖನೀಯವಾಗಿದೆ. ಗ್ರಾಮೀಣ ಪ್ರದೇಶವನ್ನು ಕೇಂದ್ರವಾಗಿರಿಸಿಕೊಂಡು 1950ರಲ್ಲಿ ಅಡ್ಕಸ್ಥಳ ಬಂಗ್ಲೆ ಕೃಷ್ಣ ನಾಯ್ಕ ಎಂಬವರು ಬಾಲೆಸಾಂತ್ ಎಂಬ ಆರಾಧನ ಕಲೆಯನ್ನು ಈ ಭಾಗದಲ್ಲಿ ಸಾರ್ವಜನಿಕವಾಗಿ ಆಚರಣೆಗೆ ತಂದಿದ್ದು ಬಳಿಕ 1975ರಿಂದ ಮುತ್ತಪ್ಪ ಮೂಲ್ಯ ಎರುಗಲ್ಲು ಮತ್ತು ದಿವಂಗತ ಸೇಸು ಮೂಲ್ಯ ಕೂರ್ಲಿಗಯ ಎಂಬವರು ಸೇರಿಕೊಂಡು ಎರುಗಲ್ಲು ಕೊರಗಪ್ಪ ಮೂಲ್ಯರ ಗದ್ದೆಯಲ್ಲಿ ಸಾರ್ವಜನಿಕವಾಗಿ ಇದನ್ನು ಮುಂದುವರಿಸಿಕೊಂಡು ಬಂದಿದ್ದರು. ಕ್ರಮೇಣ ಸೇಸು ಮೂಲ್ಯರ ಅಗಲುವಿಕೆಯ ಬಳಿಕ ಅವರ ಪುತ್ರ ದಯಾನಂದ ಕುಲಾಲ್ ಮುತ್ತಪ್ಪ ಮೂಲ್ಯರೊಂದಿಗೆ ಸೇರಿಕೊಂಡು ಊರವರ ಸಹಾಯ ಸಹಕಾರದೊಂದಿಗೆ ಆಚರಿಸುತ್ತಾ ಬಂದಿದ್ದಾರೆ. ಪ್ರಸ್ತುತ ಕಳೆದ ಮೂರು ದಿನಗಳ ಊರು ತಿರುಗಾಟದ ಬಳಿಕ ಮಾ.8ಕ್ಕೆ ಸಂಜೆ ಎರುಗಲ್ಲು ಎಂಬಲ್ಲಿ ಬಾಲೆಸಾಂತ್ ಸಾರ್ವಜನಿಕ ಆಚರಣೆ ಜರಗಲಿದೆ.
ಬಾಲೆಸಾಂತ್ ಆರಾಧನಾ ಹಿನ್ನಲೆ:
ಹಿಂದೆ ಮರಾಟಿ ಸಮುದಾಯಕ್ಕೊಳಪಟ್ಟ ಬಾಳಮ್ಮ ಎಂಬ ಹೆಂಗಸು ಬಡತನದ ಕಷ್ಟಕೋಟಲೆಯಿಂದ ಭಿಕ್ಷೆ ಬೇಡಿ ಜೀವಿಸುತ್ತಿದ್ದಳಂತೆ. ಅವಳ ಬಡತನ ನಿವಾರಣೆಗಾಗಿ ಶಾರದ ಮಾತೆ ಕನಸಿನಲ್ಲಿ ಬಂದು ಶೃಂಗೇರಿ ಜಗದ್ಗುರುಗಳ ಬಳಿ ಹೋಗಿ ಪೂಜಿಸುವಂತೆ ಆದೇಶಿಸುತ್ತಾಳೆ. ಇದರಂತೆ ಶೃಂಗೇರಿ ಗುರುಗಳು ಬಾಳಮ್ಮನನ್ನು ಹರಸಿ ಘಟ್ಟದ ಮೇಲಿನ ಒರ್ವ ಧನಿಕನೊಂದಿಗೆ ವೈವಾಹಿಕ ಬದುಕನ್ನು ನಡೆಸುವಂತೆ ಸೂಚಿಸಿ ವರ್ಷಕ್ಕೊಮ್ಮೆ ಶಾರದಾಂಬೆಯ ಪೂಜಿಸಲು ಬರುವಂತೆ ಅನುಗ್ರಹಿಸಿ ಕಳುಹಿದರು. ಕಾಲ ಕ್ರಮೇಣ ಆಸ್ತಿ ಅಂತಸ್ತಿನ ಮದದಲ್ಲಿ ಬಾಳಮ್ಮ ಶೃಂಗೇರಿ ಭೇಟಿಯ ವಿಷಯ ಮರೆತಿದ್ದು ಅದನ್ನು ನೆನಪಿಸಲು ಗುರುಗಳು ಇಬ್ಬರು ಸನ್ಯಾಸಿಗಳನ್ನು ಕಳುಹಿಸಿದರು. ಶೃಂಗೇರಿಯಿಂದ ಭಿಕ್ಷೆ ಬೇಡಲು ಬಂದವರು ತಾವೆಂದು ಸನ್ಯಾಸಿಗಳು ತಿಳಿಸಿದಾಗಲೂ ಜ್ಞಾನೋದಯವಾಗದ ಬಾಳಮ್ಮ ಹಣದ ಅಹಂಕಾರದಿಂದ ಅ ಇಬ್ಬರನ್ನು ಭಿಕ್ಷೆ ಬೇಡುವುದನ್ನು ಬಿಡಿಸಲು ತನ್ನ ಮನೆಯ ಕೆಲಸಕ್ಕೆ ಇಟ್ಟುಕೊಳ್ಳುತ್ತಾಳೆ. ಇದರಿಂದ ಹತಾಶರಾದ ಗುರುಗಳು ಇಬ್ಬರು ಆದಿವಾಸಿ ದಂಪತಿಗಳನ್ನು ಬಳಿಕ ಪೂಜೆಯ ಭಟ್ರನ್ನು,ದರ್ಶನ ಪಾತ್ರಿಯನ್ನು,ಮಂಗನ ಕುಣಿಸುವವನನ್ನು ಹೀಗೆ ವಿಧ ವಿಧದ ಜನಗಳನ್ನು ಬಾಳಮ್ಮನ ಬಳಿ ಕಳುಹಿಸಿದರೂ ಶೃಂಗೇರಿ ಬಗ್ಗೆ ನೆನಪಾಗದೆ ಉಳಿದಾಗ ಕೊನೆಗೆ ತಾವೇ ನೇರವಾಗಿ ಈ ಎಲ್ಲ ವೇಷ ಧರಿಸಿದವರನ್ನು ಕರೆದುಕೊಂಡು ಹೋಗಿ ಆಕೆಯ ಮನೆ ಮುಂದೆ ಗೌಜಿ ಗದ್ದಲದೊಂದಿಗೆ ಕುಣಿಯುತ್ತಾರೆ. ಇದರಿಂದ ನೆನಪು ಮರುಕಳಿಸಿದ ಬಾಳಮ್ಮನಿಗೆ ತನ್ನ ತಪ್ಪಿನ ಅರಿವಾಗುತ್ತದೆ. ಗುರುಗಳ ಕಾಲಿಗೆ ಬಿದ್ದು ಕ್ಷಮಾಪಣೆ ಕೇಳಿ ತನ್ನ ಹೆಸರು ಈ ಭೂಮಿ ಮೇಲೆ ಶಾಶ್ವತವಾಗಿರಿಸುವಂತೆ ಬೇಡುತ್ತಾಳೆ. ಇದರಿಂದ ಸಂತುಷ್ಠರಾದ ಗುರುಗಳು ತಾವು ಕರೆ ತಂದ ವೇಷಧಾರಿಗಳಂತೆ ವೇಷ ಧರಿಸಿ ಮಾಯಿ ತಿಂಗಳಲ್ಲಿ (ಸಾಮಾನ್ಯವಾಗಿ ಫೆಬ್ರವರಿ ಮಾಸದ ಹುಣ್ಣಿಮೆ ಅಥವ ಅ ತಿಂಗಳಲ್ಲಿ) ಇದನ್ನು ಮನೆ ಮನೆಗೆ ಸಂಚರಿಸಿ ಕುಣಿದರೆ ಕಲಿಯುಗದಲ್ಲಿ ಊರಿನ ಮಾರಿ ನೀಗುವ ಸಂಪ್ರದಾಯದ ಆರಾಧನೆ ಆಗುತ್ತದೆ ಎಂದು ಆಶೀರ್ವದಿಸಿದರಂತೆ. ಅಂದಿನಿಂದ ಈ ಆಚರಣೆ ಪ್ರಚಲಿತಕ್ಕೆ ಬಂತೆಂಬುದು ಪ್ರತೀತಿ.
ಮಾರಿ ನೀಗುವ ಆಚರಣೆ:
ದಕ್ಷಿಣ ಕನ್ನಡ ಕಾಸರಗೋಡಿನ ಗಡಿಭಾಗದಲ್ಲಿ ಅನುಷ್ಠಾನದಲ್ಲಿರುವ ಈ ಆರಾಧನಾ ಕಲೆಯನ್ನು ನಡೆಸಲು ಮರಾಟಿ ಜನಾಂಗದ ಮುಖ್ಯಸ್ಥರು ಇರಬೇಕು. ಇದರ ಸಂಧಿ ಪದಗಳು ಮರಾಟಿ ಭಾಷೆಯಲ್ಲಿದ್ದು ಅಡ್ಯನಡ್ಕ ಪರಿಸರದಲ್ಲಿ ಇದನ್ನು ಸಾರ್ವಜನಿಕವಾಗಿ ಆಚರಿಸಲಾಗುತ್ತದೆ. ಪ್ರಥಮ ಮೂರು ದಿನ ಈ ವೇಷ ಭೂಷಣ ಧರಿಸಿ ರಾತ್ತಿ ವೇಳೆ ಮನೆ ಮನೆಗೆ ಭೇಟಿ ನೀಡಿ ಜನಪದ ಸಂಪ್ರದಾಯವನ್ನು ಪ್ರದರ್ಶಿಸುವ ಈ ತಂಡ ಕೂರ್ಲಿಗಯ, ಮಳಿ,ಬಾಕಿಲಪದವು,ಕಲ್ಯಾಟೆ,ಬಿರ್ಮೂಲೆ,ಸರಳಿಮೂಲೆ ಮೊದಲಾದೆಡೆ ಸಂಚರಿಸಿ ಎರುಗಲ್ಲಿನಲ್ಲಿ ಬಾಲೆಸಾಂತ್ ಪೂಜೆಯ ಸಾರ್ವಜನಿಕ ಆಚರಣೆ ಬಹಳ ವೈಶಿಷ್ಟ್ಯ ಪೂರ್ಣವಾಗಿ ನಡೆಸುತ್ತಾರೆ. ಇದಕ್ಕಾಗಿ ಅಂದು ಬೆಳಗ್ಗಿನಿಂದಲೇ ಕೆಲಸ ಕಾರ್ಯಗಳು ಆರಂಭಗೊಳ್ಳುತ್ತದೆ. ರಾತ್ರಿ ನಡೆಯುವ ಅಗೇಲು ಬಡಿಸಲು ಕ್ವಿಂಟಾಲ್ ಗಟ್ಟಲೆ ಅಕ್ಕಿಯ ರೊಟ್ಟಿ ತಯಾರಿ ನಡೆಯುತ್ತದೆ. ಊರ ಪ್ರತಿ ಮನೆಯವರು ಸುಮಾರು 40,50 ಒಲೆ ಹಾಕಿ ಗದ್ದೆಯಲ್ಲಿ ಸಾಮೂಹಿಕ ರೊಟ್ಟಿ ತಯಾರಿ ಕಾರ್ಯ ನಡೆಸುತ್ತಾರೆ.ಅಂದು ರಾತ್ರಿ ಜನಪದೀಯ ವೇಷ ಭೂಷಣ ಕುಣಿತದೊಂದಿಗೆ ದೈವಿಕ ದರ್ಶನ ಕೂಡ ನಡೆದು ಅನುಗ್ರಹ ಪ್ರಸಾದ ನೀಡಲಾಗುತ್ತದೆ. ಬಳಿಕ ಊರ ಮಾರಿಯನ್ನು ಓಡಿಸುವ ಕ್ರಮಗಳು ನೋಡಲು ವಿಶೇಷವಾಗಿದ್ದು ಸಹಸ್ರಾರು ಜನ ಈ ಆಚರಣೆಗೆ ಭಯ ಭಕ್ತಿಯಿಂದ ಪಾಲ್ಗೊಳ್ಳುತ್ತಾರೆ.




