ಪೆರ್ಲ: ಮುಳ್ಳೇರಿಯಾ ಮಂಡಲಾತರ್ಗತ ಎಣ್ಮಕಜೆ ಹವ್ಯಕ ವಲಯ ಸಭೆ ವಲಯದ ಮುಳಿಯಾಲ ಘಟಕದ ವೇದಮೂರ್ತಿ ಕಿಳಿಂಗಾರು ಶಂಕರ ನಾರಾಯಣ ಭಟ್ ಮುಳಿಯಾಲ ನಿವಾಸದಲ್ಲಿ ವಲಯ ಅಧ್ಯಕ್ಷ ಶಂಕರ ಪ್ರಸಾದ ಕುಂಚಿನಡ್ಕ ಅವರ ಅಧ್ಯಕ್ಷತೆಯಲ್ಲಿ ಜರಗಿತು.
ಮನೆಯವರು ಧ್ವಜಾರೋಹಣ ನೆರವೇರಿಸಿ, ಶಂಖ ನಾದ, ಗುರುವಂದನೆ ಗೋವಂದನೆ, ಲಕ್ಷ್ಮೀನರಸಿಂಹ ಸ್ತೋತ್ರ ಪಠಣದೊಂದಿಗೆ ಪ್ರಾರಂಭವಾಯಿತು. ವಲಯ ಸಭೆಯಲ್ಲಿ ಮುಳ್ಳೇರಿಯಾ ಮಂಡಲ ಕಾರ್ಯದರ್ಶಿ ಕೃಷ್ಣಮೂರ್ತಿ ಮಾಡಾವು ಉಪಸ್ಥಿತರಿದ್ದರು. ಗತ ಸಭೆಯ ವರದಿ ವಾಚನ, ಲೆಕ್ಕಪತ್ರ ಹಾಗು ವಿಭಾಗವಾರು ವಿಮರ್ಶೆ ನಡೆಸಲಾಯಿತು. ವಿವಿಧ ಸಂವಾದ ವಿವರಗಳನ್ನು ಸಭೆಗೆ ತಿಳಿಸಲಾಯಿತು. ಮುಂದೆ ಜರಗಲಿರುವ ಸಮಾರಂಭಗಳ ಕಾರ್ಯಕ್ರಮಗಳ ವಿವರ ಸಭೆಗೆ ತಿಳಿಸಿ ಎಲ್ಲರ ಹೆಚ್ಚಿನ ಸಹಕಾರ ಕೋರಲಾಯಿತು.
ಇತ್ತೀಚೆಗೆ ನಿಧನರಾದ ವಲಯದ ಪಡ್ರೆ ಘಟಕದ ದೇವಕಿ ಅಮ್ಮ, ಗೋಕರ್ಣದ ಕ್ಷೇತ್ರದ ತಂತ್ರಿಗಳಾದ ಶಿತಿಕಂಠ ಹಿರೇ ಹಾಗೂ ಶ್ರೀ ಪರಿವಾರದ ಮಧುಕೇಶ್ವರ ಹೆಬ್ಬಾರ್ ಅವರ ಆತ್ಮಕ್ಕೆ ರಾಮತಾರಕ ಮಂತ್ರದ ಮೂಲಕ ಚಿರಶಾಂತಿ ಕೋರಲಾಯಿತು. ಕೃಷ್ಣಾರ್ಪಣಂ ಕಾರ್ಯಕ್ರಮಕ್ಕೆ ಛತ್ರ ಸಮರ್ಪಣೆ ಮಾಡಿಸಿದ ಶಿಷ್ಯರಿಗೆ ಪ್ರಸಾದ ವಿತರಣೆ ಮಾಡಲಾಯಿತು.
ವಲಯ ಸಭೆಯಲ್ಲಿ ವಲಯ ಪದಾಧಿಕಾರಿಗಳು, ಗುರಿಕ್ಕಾರರು, ಶ್ರೀ ಕಾರ್ಯಕರ್ತರು, ಶ್ರೀ ಮಠದ ಶಿಷ್ಯ ಭಕ್ತರು ಉಪಸ್ಥಿತರಿದ್ದರು. ಮುಂದಿನ ಸಭೆಯನ್ನು ಕೂಟೇಲು ಘಟಕದ ವೇದಮೂರ್ತಿ ಗಣಪತಿ ಭಟ್ ಬಾಕಿಲಪದವು ಅವರ ನಿವಾಸದಲ್ಲಿ ಜರಗಿಸಲು ತೀರ್ಮಾನಿಸಲಾಯಿತು. ರಾಮತಾರಕ ಮಂತ್ರ, ಶಾಂತಿ ಮಂತ್ರ, ಧ್ವಜಾವರೋಹಣ ದೊಂದಿಗೆ ಸಭೆ ಮುಕ್ತಾಯವಾಯಿತು.


