ಕಾಸರಗೋಡು: ಬೇಸಿಗೆಯ ತಾಪಮಾನ ರಾಜ್ಯದಲ್ಲಿ ಹೆಚ್ಚಾಗುತ್ತಿರುವಂತೆಯೇ ರಾಜ್ಯದ ಹಲವೆಡೆ ಬಿಸಿಲಿನ ಬೇಗೆ ಹೆಚ್ಚಳ ಸಾಧ್ಯತೆಯಿದೆ ಎಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ.
ಕೊರೊನಾ ವೈರಸ್ ಸೋಂಕು ಭೀತಿಯಿಂದಾಗಿ ರಾಜ್ಯದಲ್ಲಿ ಬಿಸಿಲ ತಾಪಮಾನದ ಬಗ್ಗೆ ಜನರಿಗೆ ಸರಿಯಾದ ಮುಂಜಾಗ್ರತಾ ನಿರ್ದೇಶ ನೀಡಲು ಸಾಧ್ಯವಾಗುತ್ತಿಲ್ಲ. ಅತ್ಯುಷ್ಣತೆ ಜತೆಗೆ ಸೂರ್ಯಘಾತವೂ ಉಂಟಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಈ ಬಗ್ಗೆ ಜನರು ಮತ್ತು ಆರೋಗ್ಯ ಇಲಾಖೆಯವರು ಅಗತ್ಯದ ಮುಂಜಾಗ್ರತೆ ಪಾಲಿಸಬೇಕು. ಜನರು ಬೆಳಗ್ಗೆ 11 ಗಂಟೆಯಿಂದ 3 ಗಂಟೆ ತನಕ ಬಿಸಿಲಲ್ಲಿ ದುಡಿಯುವುದು, ನಡೆದಾಡುವುದು ಹೊರತುಪಡಿಸಬೇಕು. ಧಾರಾಳ ನೀರು ಕುಡಿಯಬೇಕೆಂದು ಆರೋಗ್ಯ ಇಲಾಖೆ ಸಲಹೆ ನೀಡಿದೆ. ಕಣ್ಣೂರಿನಿಂದ ತಿರುವನಂತಪುರ ಜಿಲ್ಲೆಯ ತನಕದ ಕರಾವಳಿ ಪ್ರದೇಶಗಳಲ್ಲಿ ಹೆಚ್ಚಾಗಿ ಅತ್ಯುಷ್ಣ ತಲೆದೋರಲಿದೆ.
ಕಲ್ಲಿಕೋಟೆ ಜಿಲ್ಲೆಯಲ್ಲಿ ಅದು ಇನ್ನಷ್ಟು ಏರಲಿದೆ. ರಾಜ್ಯದ ವಿವಿಧೆಡೆಗಳಲ್ಲಿ ಸಾಧಾರಾಣ ತಾಪಮಾನ ಮಟ್ಟದಲ್ಲಿ 2 ರಿಂದ 3 ಡಿಗ್ರಿ ಮತ್ತು ಇನ್ನು ಕೆಲವೆಡೆಗಳಲ್ಲಿ 3 ಡಿಗ್ರಿಯಿಂದ 4 ಡಿಗ್ರಿ ತನಕ ಏರಿದೆ. ತಾಪಮಾನ ಮಟ್ಟ ಕೆಲವೆಡೆಗಳಲ್ಲಿ 35.8 ಡಿಗ್ರಿ ಮತ್ತು ಇನ್ನು ಕೆಲವೆಡೆಗಳಲ್ಲಿ 38.5 ಡಿಗ್ರಿಗೇರಿದೆ ಎಂದು ಇಲಾಖೆ ತಿಳಿಸಿದೆ.


