ಕಾಸರಗೋಡು: ವಿಶ್ವದೆಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ವೈರಾಣುವನ್ನು ಭಾರತದಲ್ಲಿ ನಿಯಂತ್ರಿಸುವುದಕ್ಕೆ ಕೇಂದ್ರ ಸರಕಾರ ಕೈಗೊಂಡ ಕ್ರಮ ಅಭಿನಂದನಾರ್ಹ ಎಂದು ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಹೇಳಿದ್ದಾರೆ.
ಪಿತ್ತಕೋಶ ರೋಗದಿಂದ ಬಳಲಿ ಎರ್ನಾಕುಳಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೂರನೇ ತರಗತಿ ವಿದ್ಯಾರ್ಥಿ ಜಸಿಲ್ ಅವರಿಗೆ ಸಹಾಯ ನೀಡಲು ಪರಿವಾರ ಪಾಲಕುನ್ನು ಹಾಗು ಬಿಜೆಪಿ ಪಾಲಕುನ್ನು ಟೌನ್ ಸಮಿತಿ ಸಂಗ್ರಹಿಸಿದ ಸಹಾಯ ನಿಧಿಯನ್ನು ಕುಟುಂಬಕ್ಕೆ ಹಸ್ತಾಂತರಿಸಿ ಅವರು ಮಾತನಾಡಿದರು.
ಕೊರೊನಾ ವೈರಾಣು ಹರಡುವುದನ್ನು ತಡೆಯಲು ತಕ್ಕ ಸಮಯದಲ್ಲಿ ಕೇಂದ್ರ ವಿವಿಧ ಕಾರ್ಯವನ್ನು ಕೈಗೊಂಡಿದೆ ಎಂದವರು ಹೇಳಿದರು. ಇದೇ ವೇಳೆ ಜಸಿಲ್ ಅವರ ಚಿಕಿತ್ಸೆಗೆ ಬೃಹತ್ ಮೊತ್ತ ಅಗತ್ಯವಿದ್ದು, ಹೃದಯವಂತರು ಸಹಾಯ ನೀಡಬೇಕೆಂದು ಅವರು ಕರೆ ನೀಡಿದರು.
ಬಿಜೆಪಿ ನಗರ ಸಮಿತಿ ಅಧ್ಯಕ್ಷ ಸುರೇಶ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಸಮಿತಿ ಸದಸ್ಯ ವೈ.ಕೃಷ್ಣದಾಸ್, ರಾಜೇಶ್ ಕೈಂದಾರ್, ತಂಬಾನ್ ಅಚ್ಚೇರಿ, ಎನ್.ಬಾಬುರಾಜ್, ವಿ.ಮಾದವನ್ ಮಾತನಾಡಿದರು.


