ನವದೆಹಲಿ: ಕೊರೋನಾ ವೈರಸ್ ಹೊಡೆತಕ್ಕೆ ಜಗತ್ತೇ ತತ್ತರಿಸಿ ಹೋಗಿದೆ. ಇದರಿಂದ ಜಾಗತಿಕ ವ್ಯಾಪಾರದ ಮೇಲೆ ಕಾರ್ಮೋಡ ಆವರಿಸಿದ್ದು ಇದರ ಮುನ್ಸೂಚನೆಯಂತೆ ಭಾರತದ ರಫ್ತು ಕ್ಷೇತ್ರದಲ್ಲಿ ಸುಮಾರು 15 ಮಿಲಿಯನ್ ಜನರು ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ ಎಂದು ರಫ್ತುದಾರರ ಸಂಸ್ಥೆ ಎಫ್ ಐ ಇ ಒ ತಿಳಿಸಿದೆ.
ಇದರ ಜೊತೆಗೆ ಈ ಕ್ಷೇತ್ರಕ್ಕೆ ಕೇಂದ್ರ ಸರ್ಕಾರ ಪರಿಹಾರ ಪ್ಯಾಕೇಜ್ ತಕ್ಷಣ ಘೋಷಿಸಬೇಕು ಎಂದು ಭಾರತೀಯ ರಫ್ತು ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಶರದ್ ಕುಮಾರ್ ಮನವಿ ಮಾಡಿದ್ದಾರೆ. ಜೀವನ ಮತ್ತು ಜೀವನೋಪಾಯದ ನಡುವೆ ಉತ್ತಮ ಸಮತೋಲನ ಅಗತ್ಯವಾಗಿದೆ. ಏಕೆಂದರೆ ಸದ್ಯದ ಮಟ್ಟಿಗೆ ಒಂದನ್ನು ಮಾತ್ರ ದೇಶದ ಜತೆಗೆ ಆರಿಸಿಕೊಳ್ಳಬೇಕಿದೆ. ರಫ್ತುದಾರರಿಗೆ ಬಹಳ ಕಡಿಮೆ ಅವಕಾಶಗಳು ಉಳಿದಿವೆ. ಕಾರ್ಖಾನೆಗಳಿಗೆ ಕನಿಷ್ಠ ಉದ್ಯೋಗಿಗಳೊಂದಿಗೆ ಕೆಲಸ ಮಾಡಲು ಅವಕಾಶ ಸಿಗದೆ ಹೋದರೆ ಉದ್ಯೋಗ ನಷ್ಟ ಅನುಭವಿಸಬೇಕಾಗುತ್ತದೆ. ಜೊತೆಗೆ ಕಾರ್ಖಾನೆಗಳನ್ನು ಮುಚ್ಚಬೇಕಾಗುತ್ತದೆ ಎಂದರು.ರಫ್ತು ಕ್ಷೇತ್ರದಲ್ಲಿ ಶೇಖಡ 50ಕ್ಕಿಂತ ಹೆಚ್ಚು ಆರ್ಡರ್ ಗಳನ್ನು ರದ್ದುಪಡಿಸುವುದು ಭವಿಷ್ಯದದಲ್ಲಿ ರಫ್ತು ಕ್ಷೇತ್ರದ ಮೇಲೆ ಕಾರ್ಗತಲು ಕವಿಯುವ ಮುನ್ಸೂಚನೆ ಸಿಗುತ್ತಿದ್ದು ಇದರ ಜೊತೆಗೆ ಉದ್ಯೋಗಗಳು ನಷ್ಟವಾಗಲಿದೆ ಎಂದರು.
ಲಾಕ್ ಡೌನ್‍ನಿಂದ ಆಭರಣಗಳು, ಚರ್ಮ, ಕರಕುಶಲ ವಸ್ತುಗಳು, ಎಂಜಿನಿಯರಿಂಗ್ ಮತ್ತು ಜವಳಿ ಸೇರಿದಂತೆ ಹಲವು ಕ್ಷೇತ್ರಗಳು ತೀವ್ರವಾಗಿ ತುತ್ತಾಗುತ್ತವೆ. "ನಾವು ಚೀನಾ ಮಾರುಕಟ್ಟೆಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಹೀಗಾಗಿ ಮತ್ತೆ ಚೀನಾವನ್ನು ಅವಲಂಭಿಸದಿರಬೇಕಾದರೆ, ನಾವು ಈಗಲೇ ನಮ್ಮಲ್ಲಿ ಕಾರ್ಖಾನೆಗಳನ್ನು ಪ್ರಾರಂಭಿಸಬೇಕು. ಸಣ್ಣ ಆರ್ಥಿಕತೆಯ ದೇಶಗಳಾದ ಬಾಂಗ್ಲಾದೇಶ ಮತ್ತು ಶ್ರೀಲಂಕಾವೇ ಪರಿಹಾರ ಪ್ಯಾಕೇಜ್‍ಗಳನ್ನು ಘೋಷಿಸಿವೆ ಎಂದು ಅವರು ಹೇಳಿದರು.


