ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಭಾನುವಾರ (ಏ.12)ಕೋವಿಡ್ 19 ನಿಯಂತ್ರಣದಲ್ಲಿ ಯಶಸ್ವಿ ದಿನ. ಭಾನುವಾರ ಯಾರಿಗೂ ಕೋವಿಡ್ 19 ಸೋಂಕು ಖಚಿತವಾದುದು ವರದಿಯಾಗಿಲ್ಲ.
ಕಾಸರಗೋಡು ಜನರಲ್ ಸರಕಾರಿ ಆಸ್ಪತ್ರೆಯಲ್ಲಿ ಸೋಂಕು ಖಚಿತಗೊಂಡು ದಾಖಲಾಗಿದ್ದ 26 ಮಂದಿ ಭಾನುವಾರ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಕಣ್ಣೂರು ಸರಕಾರಿ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾಸರಗೋಡು ಜಿಲ್ಲೆಯ ನಿವಾಸಿಗಳಿಬ್ಬರ ಫಲಿತಾಂಶ ನೆಗೆಟಿವ್ ಆಗಿದೆ. ಈ ವರೆಗೆ ಜಿಲ್ಲೆಯಲ್ಲಿ ಕೋವಿಡ್ 19 ಖಚಿತಗೊಂಡಿದ್ದ 166 ಮಂದಿಯಲ್ಲಿ 61 ಮಂದಿ ಗುಣಮುಖರಾಗಿದ್ದಾರೆ. ದೇಶದಲ್ಲೇ ಪ್ರಥಮ ಬಾರಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಗುಣಮುಖರಾಗಿ ಯಾವ ಆಸ್ಪತ್ರೆಯಿಂದಲೂ ಬಿಡುಗಡೆಗೊಂಡವರಿಲ್ಲ.
ಜಿಲ್ಲೆಯಲ್ಲಿ ಶೇ 37 ರಿಕವರಿ ರೇಟ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ (ಆರೋಗ್ಯ) ಡಾ.ಎ.ವಿ.ರಾಮದಾಸ್ ತಿಳಿಸಿದರು. ದೇಶದಲ್ಲಿ ಶೇ 11.4 ಆಗಿದ್ದು,ಅಮೆರಿಕದಲ್ಲಿ 5.7 ಆಗಿದೆ. ರೋಗ ಬಾಧಿತರಲ್ಲಿ ಯಾರೂ ಮೃತಪಟ್ಟಿಲ್ಲ ಎಂಬುದೂ ಗಮನಾರ್ಹ. ಈ ಸಾಧನೆಗೆ ಸರ್ವ ಸಹಕಾರ ನೀಡಿದ ವಿಶೇಷ ಅಧಿಕಾರಿ ಅಲ್ ಕೇಷ್ ಕುಮಾರ್ ಶರ್ಮ, ಜಿಲ್ಲಾಡಳಿತೆ, ಪೆÇಲೀಸ್ ದಳ, ವೈದ್ಯರು, ದಾದಿಯರು, ಆರೋಗ್ಯ ಕಾರ್ಯಕರ್ತರು ಮತ್ತು ರಾಜ್ಯ ಸರಕಾರ- ಆರೋಗ್ಯ ಇಲಾಖೆ ತಿಳಿಸಿದ ಸಲಹೆ-ಸೂಚನೆಗಳನ್ನು ಪಾಲಿಸಿದ ಸಾರ್ವಜನಿಕರು ಅಭಿನಂದನಾರ್ಹರು ಎಂದು ಜಿಲ್ಲಾ ವೈದ್ಯಾಧಿಕಾರಿ ತಿಳಿಸಿರುವರು.
ಕಾಸರಗೋಡಿನಲ್ಲಿ ಭಾನುವಾರ 28 ಮಂದಿ ಗುಣಮುಖ:
ಕಾಸರಗೋಡು ಜಿಲ್ಲೆಯಲ್ಲಿ ಭಾನುವಾರ ಸಮಾಧಾನಕರ ದಿನವಾಗಿತ್ತು. ಕೋವಿಡ್ 19 ಸೋಂಕು ಬಾಧಿತರಾಗಿದ್ದು, ಆಸ್ಪತ್ರೆಗಳಲ್ಲಿ ದಾಖಲಾಗಿದ್ದ 28 ಮಂದಿ (ಕಣ್ಣೂರು ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರ ಸಹಿತ) ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಟೀಚರ್ ತಿಳಿಸಿದರು.
ರಾಜ್ಯದಲ್ಲಿ 179 ಮಂದಿ ಈ ವರೆಗೆ ಗುಣಮುಖರಾಗಿದಾರೆ. 194 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 1,16,941 ಮಂದಿ ಸೋಂಕು ಖಚಿತಗೊಂಡು ನಿಗಾದಲ್ಲಿದ್ದಾರೆ. ಇವರಲ್ಲಿ 1,16,125 ಮಂದಿ ಮನೆಗಳಲ್ಲೂ, 816 ಮಂದಿ ಆಸ್ಪತ್ರೆಗಳಲ್ಲೂ ನಿಗಾದಲ್ಲಿದ್ದಾರೆ ಎಂದವರು ನುಡಿದರು.
ರಾಜ್ಯದಲ್ಲಿ ಭಾನುವಾರ ಇಬ್ಬರಿಗೆ ಸೋಂಕು ಖಚಿತವಾಗಿದೆ. ಇವರು ಕಣ್ಣೂರು ಮತ್ತು ಪತ್ತನಂತಿಟ್ಟ ಜಿಲ್ಲೆಯವರು. ಕಣ್ಣೂರು ನಿವಾಸಿ ದುಬಾಯಿಯಿಂದ ಬಂದವರು. ಪತ್ತನಂತಿಟ್ಟ ನಿವಾಸಿ ಶಾರ್ಜಾದಿಂದ ಆಗಮಿಸಿದವರು ಎಂದು ಸಚಿವೆ ತಿಳಿಸಿದರು.
ಲಾಕ್ ಡೌನ್ ಉಲ್ಲಂಘನೆ: 27 ಕೇಸುಗಳ ದಾಖಲು:
ಲಾಕ್ ಡೌನ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಏ.11ರಂದು 27 ಕೇಸುಗಳನ್ನು ದಾಖಲಿಸಲಾಗಿದೆ. 49 ಮಂದಿಯನ್ನು ಬಂಧಿಸಲಾಗಿದ್ದು, 16 ವಾಹನಗಳನ್ನು ವಶಪಡಿಸಲಾಗಿದೆ. ಮಂಜೇಶ್ವರ ಪೆÇಲೀಸ್ ಠಾಣೆಯಲ್ಲಿ 1, ಕಾಸರಗೋಡು 1, ವಿದ್ಯಾನಗರ 3, ಆದೂರು 2, ಬೇಡಗಂ 2, ಮೇಲ್ಪರಂಬ 3, ಅಂಬಲತ್ತರ 1,ನೀಲೇಶ್ವರ 1, ಚಂದೇರ 3, ಚೀಮೇನಿ 1, ವೆಳ್ಳರಿಕುಂಡ್ 2, ಚಿತ್ತಾರಿಕಲ್ಲ್ 1, ರಾಜಪುರ 3, ಹೊಸದುರ್ಗ 1 ಕೇಸು ಗಳನ್ನು ದಾಖಲಿಸಲಾಗಿದೆ. ಜಿಲ್ಲೆಯಲ್ಲಿ ಈ ವರೆಗೆ 726 ಕೇಸುಗಳನ್ನು ದಾಖಲಿಸಲಾಗಿದೆ. 1193 ಮಂದಿಯನ್ನು ಬಂಧಿಸಲಾಗಿದೆ. 439 ವಾಹನಗಳನ್ನು ವಶಪಡಿಸಲಾಗಿದೆ.


