ಕಾಸರಗೋಡು: ಅಭಿವೃದ್ಧಿಯ ಸಂಕೇತದ ಹಬ್ಬ ವಿಷುವನ್ನು ಕೇರಳ ಸಹಿತ ತುಳುನಾಡು ಸಂಭ್ರಮದಿಂದ ಆಚರಿಸುವುದು ವಾಡಿಕೆ. ಆದರೆ ಈ ಬಾರಿ ಬಂದೊದಗಿದ ಜಾಗತಿಕ ವಿಪತ್ತು ಕೋವಿಡ್ ಕೊರೊನಾ ವೈರಸ್ ಭೀತಿ, ಅವಾಂತರಗಳ ಮಧ್ಯೆ ಎಲ್ಲೆಡೆ ಜನಜೀವನ ಸಂಕಷ್ಟಕ್ಕೊಳಗಾಗಿದೆ.
ಆದರೆ ಪ್ರಕೃತಿ ತನ್ನ ವಾಡಿಕೆಯಂತೆ, ಯಾವ ಬದಲಾವಣೆಗಳೂ ಇಲ್ಲದೆ ನಿರಾಳವಾದಂತೆ ಭಾಸವಾಗುತ್ತಿದ್ದು, ಅದರ ಚಟುವಟಿಕೆಗಳು ನಿಶ್ಚಿಂತೆಯಿಂದ ಸಾಗಿದೆ. ತುಳುನಾಡಿನ ಹೊಸ ವರ್ಷದ ಸಂಭ್ರಮದ ದ್ಯೋತಕವಾಗಿ ಅರಳುವ ಕೊನ್ನೆ ಹೂ ಪ್ರಸ್ತುತ ವರ್ಷವೂ ಎಂದಿನ ಗರಿಮೆಯಿಂದ ನಳನಳಿಸುತ್ತಿದೆ. ಜೊತೆಗೆ ಪ್ರಕೃತಿಯನ್ನೇ ನುಂಗ ಹೊರಟ ಮಾನವನ ಪಡುಪಾಟಲನ್ನು ಕಂಡು ಗಹಗಹಿಸಿ ನಗುವಂತೆಯೂ ಕಂಡುಬರುತ್ತಿದೆ!
ಕೇರಳ ರಾಜ್ಯದ ಜನತೆ ಜಾತಿ, ಮತ ಭೇದವಿಲ್ಲದೆ ಆಚರಿಸುವ ಹಬ್ಬಗಳಲ್ಲಿ ವಿಷು ಒಂದಾಗಿದೆ. ಸೂರ್ಯನು ಮೀನ ರಾಶಿಯಿಂದ ಮೇಷ ರಾಶಿಗೆ ಕಾಲಿರಿಸುವ ವರ್ಷದ ಆರಂಭವೇ "ವಿಷು". ಕಾಸರಗೋಡು ಜಿಲ್ಲೆಯಲ್ಲಿ ಕನ್ನಡ ಮತ್ತು ಕೇರಳೀಯ ಸಂಸ್ಕøತಿಯನ್ನು ಸೇರಿಸಿಕೊಂಡು ವಿಷು ಹಬ್ಬ ಆಚರಿಸಲಾಗುತ್ತಿದೆ.
ಕಳೆದ ಎರಡು ದಿವಸಗಳಿಂದ ಜಿಲ್ಲೆಯಾದ್ಯಂತ ಮಳೆಯಾಗುತ್ತಿದ್ದು, ಬಿಸಿಲಿನ ಪ್ರಖರತೆ ಕಡಿಮೆಯಾಗಿದೆ. ಬಿರು ಬೇಸಿಗೆಯಲ್ಲಿ ಕಾದು ಕೆಂಡದಂತಿದ್ದ ಭೂಮಿ ಹಸಿರಿನಿಂದ ಕಂಗೊಳಿಸಲಾರಂಭಿಸಿದ್ದು, ಮರಗಳು ಚಿಗುರಿ ನಿಂತಿದ್ದು, ವಿಷು ಹಬ್ಬಕ್ಕೆ ವಿಶೇಷ ಕಳೆ ನೀಡಿದೆ.
ವಿಷು ಹಬ್ಬದ ಸಂಕೇತವಾಗಿ ಬಳಸುವ ಕೊನ್ನೆಹೂವುಗಳ ಮರಗಳು ಬಂಗಾರದ ವರ್ಣದ ಕೊನ್ನೆ ಹೂವುಗಳೊಂದಿಗೆ ಅರಳಿ ನಿಂತಿದ್ದು, ಗಮನಸೆಳೆಯುತ್ತಿದೆ. ಏಪ್ರಿಲ್ ತಿಂಗಳಲ್ಲಿ ಹಸಿರು ಮರ ತುಂಬಾ ಬಂಗಾರ ವರ್ಣದ ಕೊನ್ನೆ ಹೂವು ವ್ಯಾಪಕವಾಗಿ ಅರಳಿ ನಿಂತು ವಿಷು ಹಬ್ಬಕ್ಕೆ ಮೆರಗು ನೀಡುತ್ತಿದೆ.
ವಿಷುವಿನ ದಿನದಂದು ಮನೆ ಮಂದಿಯೆಲ್ಲಾ ಮಿಂದು ಶುಚಿರ್ಭೂತರಾಗಿ "ವಿಷು ಕಣಿ"ಯನ್ನು ನೋಡುವ ಸಂಪ್ರದಾಯ ಹಿಂದಿನಿಂದಲೂ ನಡೆದು ಬರುತ್ತಿದೆ. ಕಣಿ ಎಂದರೆ ಶ್ರೇಯಸ್ಸು, ಶಕುನ, ಭವಿಷ್ಯ ಎಂಬರ್ಥವಿದೆ. ಹಲಸು, ಮಾವು, ಸೌತೆ, ಸೀಯಾಳ, ಅಡಕೆ ಸಹಿತ ಫಲವಸ್ತುಗಳು, ಧನ, ಧಾನ್ಯ, ಕನಕ, ಹೊಸ ಬಟ್ಟೆ, ಕೊನ್ನೆ ಹೂವು, ಕನ್ನಡಿಯೊಂದಿಗೆ ಶ್ರೀಕೃಷ್ಣನ ವಿಗ್ರಹವನ್ನು ತಟ್ಟೆಯಲ್ಲಿರಿಸಿ ಕಾಲುದೀಪ ಉರಿಸಿ ವಿಷು ಕಣಿಯನ್ನು ಸಜ್ಜುಗೊಳಿಸಲಾಗುತ್ತದೆ.
ಸೂರ್ಯೋದಯಕ್ಕೆ ಮೊದಲು ಮಕ್ಕಳ ಕಣ್ಣನ್ನು ಕೈಯಿಂದ ಮುಚ್ಚಿ ಹಿರಿಯರು ಇವರಿಗೆ ವಿಷು ಕಣಿಯನ್ನು ತೋರಿಸುತ್ತಾರೆ. ಇದರಿಂದ ಶುಭ ಉಂಟಾಗುತ್ತದೆ ಎಂಬುದು ಹಿರಿಯರ ನಂಬಿಕೆ. ವಿಷು ಕಣಿಯನ್ನು ಕಂಡ ಕಿರಿಯರು ಹಿರಿಯರ ಪಾದಕ್ಕೆರಗಿ ನಮಸ್ಕರಿಸಿ ಅವರಿಂದ ಆಶೀರ್ವಾದ ಪಡೆದುಕೊಳ್ಳುತ್ತಾರೆ. ಈ ರೀತಿ ಆಶೀರ್ವಾದ ಪಡೆಯಲು ಬಂದವರಿಗೆ ಹಣ, ವಸ್ತು ರೂಪದಲ್ಲಿ ಉಡುಗೊರೆ ನೀಡಲಾಗುತ್ತದೆ.
ವಿಷು ಹಬ್ಬದ ದಿನ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರುತ್ತದೆ. ವಿಷು ದಿನದಂದು ಪ್ರತಿಯೊಬ್ಬ ದೇವಸ್ಥಾನ, ಕುಟುಂಬದ ತರವಾಡು ಮನೆಯಲ್ಲಿ ಪ್ರಾರ್ಥನೆ ಸಲ್ಲಿಸಿ, ಸಂಬಂಧಿಕರ, ಆತ್ಮೀಯರ ಮನೆಗಳಿಗೆ ಹಿರಿಯರಿಂದ ಆಶೀರ್ವಾದ ಪಡೆದುಕೊಂಡು ಶುಭ ಹಾರೈಕೆಯ ವಿನಿಮಯ ನಡೆಸುತ್ತಾರೆ. ಕುಂಬಳೆ ಸೀಮೆಯ ಪ್ರಮುಖ ದೇವಸ್ಥಾನಗಳಾದ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ, ಅಡೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಕುಂಬಳೆ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನ, ಮುಜುಂಗಾವು ಶ್ರೀ ಪಾರ್ಥಸಾರಥೀಕೃಷ್ಣ ಸಹಿತ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗುತ್ತದೆ. ಗುರುವಾಯೂರು ಶ್ರೀಕೃಷ್ಣನ ಸನ್ನಿಧಿಯಲ್ಲಿ ವಿಷುಕಣಿ ವಿಶ್ವ ಪ್ರಸಿದ್ಧಿಗೆ ಕಾರಣವಾಗಿದೆ.
ಗ್ರಾಮೀಣ ಪ್ರದೇಶಗಳಲ್ಲಿ ನಡೆದುಬರುತ್ತಿದ್ದ ಒಕ್ಕಲು ಸಂಪ್ರದಾಯದನ್ವಯ ಊರಿನ ಪ್ರಮುಖರ(ದನಿ)ಮನೆಗೆ ತೆರಳಿ ಕಣಿ ದರ್ಶನ ಮಾಡುವ ಸಂಪ್ರದಾಯ ಇಂದಿಗೂ ಕೆಲವೆಡೆ ಜಾರಿಯಲ್ಲಿದೆ. ತಮ್ಮ ಕುಲ ಕಸುಬುಗಳಿಗನುಸಾರವಾಗಿ ಚಾಪೆ, ಬುಟ್ಟಿ, ಕತ್ತಿ ಸಹಿತ ವಿವಿಧ ಸಾಮಗ್ರಿಗಳನ್ನು ನೀಡಿ, ಆಶೀರ್ವಾದ ಪಡೆದುಕೊಳ್ಳುವುದರೊಂದಿಗೆ ಅಲ್ಲಿಂದ ತೆಂಗಿನ ಕಾಯಿ, ವಿವಿಧ ರೀತಿಯ ತಿನಿಸುಗಳನ್ನು ಸ್ವೀಕರಿಸುವುದು ಸಂಪ್ರದಾಯ.
ಕೃಷಿ ಕೆಲಸಗಳಿಗೆ ಇದೇ ದಿನದಂದು ಚಾಲನೆ ನೀಡಲಾಗುತ್ತದೆ. ಇದಕ್ಕಾಗಿ ಗದ್ದೆಯಲ್ಲಿ ಎತ್ತುಗಳಿಗೆ ನೊಗ ಕಟ್ಟಿ ಒಂದೆರಡು ಸುತ್ತು ಉಳುವುದು ಸಂಪ್ರದಾಯ. ಆದರೆ ಈ ವರ್ಷ ಇಂತಹ ಯಾವ ಸಂಭ್ರಮವೂ ಕಾಣಸಿಗದು. ಮಹಾಮಾರಿ ಕೊರೊನಾ ಅವಾಂತರದ ಮಧ್ಯೆ ಜನರು ಬದುಕಿನ ಭವಿಷ್ಯದ ನಿರೀಕ್ಷೆಯಲ್ಲಿ ಮನೆಯೊಳಗೆ ಸಾಂಪ್ರದಾಯಿಕವಾಗಿ ಹಬ್ಬ ಆಚರಿಸುವ ಮಟ್ಟಿಗಷ್ಟೇ ಸೀಮಿತವಾಗಿರುವುದು ಉಲ್ಲೇಖಾರ್ಹ.
(ಚಿತ್ರ ಮಾಹಿತಿ: ಬಂಗಾರದ ವರ್ಣದ ಹೂವನ್ನು ಮೈತುಂಬಾ ಅರಳಿಸಿಕೊಂಡು ಗಮನಸೆಳೆಯುತ್ತಿರುವ ಕೊನ್ನೆಹೂವಿನ ಮರ.)


