ಮಂಗಳೂರು: ತುರ್ತು ಚಿಕಿತ್ಸೆ ಅಗತ್ಯವಿರುವ ಕೇರಳದ ರೋಗಿಗಳು ದೇರ್ಲಕಟ್ಟೆಯಲ್ಲಿರುವ ನ್ಯಾಯಮೂರ್ತಿ ಕೆ ಎಸ್ ಹೆಗ್ಡೆ ಚಾರಿಟಬಲ್ ಆಸ್ಪತ್ರೆಯಲ್ಲಿ ಮಾತ್ರ ಚಿಕಿತ್ಸೆ ಪಡೆಯವುದಕ್ಕೆ ಅವಕಾಶ ನೀಡಿ ಜಿಲ್ಲಾಧಿಕಾರಿ ಸಿಂಧು ಬಿ ರೂಪೇಶ್ ಪರಿಷ್ಕೃತ ಆದೇಶ ಹೊರಡಿಸಿದ್ದಾರೆ ಎಂದು ಅಧಿಕೃತ ಮೂಲಗಳು ಗುರುವಾರ ಇಲ್ಲಿ ಸ್ಪಷ್ಟಪಡಿಸಿವೆ.
ತಲಪಾಡಿಯಲ್ಲಿ ಕೇರಳದ ಗಡಿಯನ್ನು ತೆರೆದ ನಂತರ ಈ ಆದೇಶ ಹೊರಡಿಸಲಾಗಿದೆ. ತುರ್ತು ಚಿಕಿತ್ಸೆಯ ಅಗತ್ಯವಿರುವ ರೋಗಿಗಳಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ಆಡಳಿತ ಸ್ಪಷ್ಟಪಡಿಸಿರುವುದಾಗಿ ಮೂಲಗಳು ತಿಳಿಸಿವೆ.
ಗಡಿ ತೆರೆಯುವಂತೆ ಕರ್ನಾಟಕ ಸರ್ಕಾರಕ್ಕೆ ಸೂಚಿಸುವಂತೆ ಕೇರಳ ಸರ್ಕಾರ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಸೂಚನೆ ನಂತರ ಕೆಲ ಪೂರ್ವ ಷರತ್ತುಗಳೊಂದಿಗೆ ತಲಪಾಡಿ ಗಡಿಯನ್ನು ತೆರೆಯಲಾಗಿದೆ.
ಸುಪ್ರೀಂ ಕೋರ್ಟ್ ನ ಸೂಚನೆ ಹೊರತಾಗಿಯೂ ಕರ್ನಾಟಕ ಆಡಳಿತ ಕೇರಳದ ತೀವ್ರ ಅನಾರೋಗ್ಯ ಪೀಡಿತ ರೋಗಿಗಳು ಮಂಗಳೂರು ಆಸ್ಪತ್ರೆಗಳಿಗೆ ಹೋಗಲು ತಾರತಮ್ಯ ಮತ್ತು ಆಲಕ್ಷ್ಯ ವಹಿಸುತ್ತಿದೆ ಎಂದು ಕಾಸರಗೋಡಿನ ಸರ್ಕಾರಿ ಆರೋಗ್ಯ ಅಧಿಕಾರಿಗಳು ಆರೋಪಿಸಿದ್ದಾರೆ.


