ಕಾಸರಗೋಡು: ಕೋವಿಡ್-19 ಬಾಧೆ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಮೀನು ಲಭ್ಯತೆ ಕುಸಿಯುತ್ತಿರುವುದನ್ನು ಮನಗಂಡು ರಾಸಾಯನಿಕ ಬೆರೆಸಿದ ಮೀನು ಮಾರಾಟ ವಯಾಪಕಗೊಳ್ಳುತ್ತಿದೆ. ಈ ಬಗ್ಗೆ ಲಭಿಸಿದ ಮಾಹಿತಿಯನ್ವಯ ಕಾಸರಗೋಡು ಜಿಲ್ಲಾ ಮೀನುಗಾರಿಕಾ ಇಲಾಖೆ ಮತ್ತು ಆಹಾರ ಸುರಕ್ಷಾ ವಿಭಾಗ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ತೃಕ್ಕರಿಪುರದಲ್ಲಿ ಫಾರ್ಮಾಲಿನ್ ರಾಸಾಯನಿಕ ಬೆರೆಸಿದ 50ಕಿ.ಗ್ರಾಂ ಮೀನು ವಶಪಡಿಸಿಕೊಳ್ಳಲಾಗಿದೆ.
ಇಲ್ಲಿನ ನಡಕ್ಕಾವಿನಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಈ ಮೀನನ್ನು ನಾಶಗೊಳಿಸಲಾಗಿದೆ. ಆರೋಗ್ಯಕ್ಕೆ ಭಾರಿ ಹಾನಿ ತಂದೊಡ್ಡುವ ಫಾರ್ಮಾಲಿನ್ ಬೆರೆಸುವ ಮೂಲಕ ಮೀನನ್ನು ದೀರ್ಘ ಕಾಲ ಕೆಡದಂತೆ ಸಂರಕ್ಷಿಸಿಡಲಾಗುತ್ತಿದೆ. 'ಆಪರೇಶನ್ ಸಾಗರ್‍ರಾಣಿ' ಹೆಸರಿನಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಈ ರೀತಿಯ ಕಾರ್ಯಾಚರಣೆ ಮುಂದುವರಿಯಲಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.


