ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ(ಭಾನುವಾರ) ಮಾರಕ ಕೊರೋನಾ ವೈರಸ್ ಗೆ 47 ಮಂದಿ ಸೋಂಕಿತರು ಸಾವನ್ನಪ್ಪಿದ್ದು, ಆ ಮೂಲಕ ಮಾರಕ ಕೊರೋನಾ ವೈರಸ್ ಗೆ ಬಲಿಯಾದವರ ಸಂಖ್ಯೆ 826ಕ್ಕೇರಿದೆ.
ಅಂತೆಯೇ 24 ಗಂಟೆಗಳ ಅವಧಿಯಲ್ಲಿ 1,975 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಆ ಮೂಲಕ ದೇಶದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ 26,917ಕ್ಕೆ ಏರಿಕೆಯಾಗಿದೆ. ಈ ಪೈಕಿ ಶೇ.21.96ರಷ್ಚು ಅಂದರೆ ಸೋಂಕಿತರು 5,913 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟಾರೆ ಸೋಂಕಿತರಲ್ಲಿ 111 ಮಂದಿ ವಿದೇಶಿಗರೂ ಕೂಡ ಇದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಶನಿವಾರ ಸಂಜೆಯಿಂದ ಈ ವರೆಗೂ ದೇಶದಲ್ಲಿ 47 ಮಂದಿ ಕೊರೋನಾ ಸೋಂಕಿತರು ಸಾವನ್ನಪ್ಪಿದ್ದು, ಈ ಪೈಕಿ ಮಹಾರಾಷ್ಟ್ರವೊಂದರಲ್ಲೇ 22 ಮಂದಿ ಸಾವನ್ನಪ್ಪಿದ್ದಾರೆ. ಉಳಿದಂತೆ ರಾಜಸ್ಥಾನದಲ್ಲಿ 8, ಮಧ್ಯ ಪ್ರದೇಶದಲ್ಲಿ 7, ಗುಜರಾತ್ ನಲ್ಲಿ 6 ಮತ್ತು ದೆಹಲಿ, ಉತ್ತರ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಮತ್ತು ತಮಿಳುನಾಡಿನಲ್ಲಿ ತಲಾ ಒಬ್ಬರು ಸೋಂಕಿತರು ಸಾವನ್ನಪ್ಪಿದ್ದಾರೆ. ಆ ಮೂಲಕ ಮಾರಕ ಕೊರೋನಾ ವೈರಸ್ ಗೆ ಬಲಿಯಾದವರ ಸಂಖ್ಯೆ 826ಕ್ಕೇರಿದೆ.
ದೇಶದಲ್ಲೇ ಮಹಾರಾಷ್ಟ್ರದಲ್ಲಿ ಗರಿಷ್ಠ 7,628 ಸೋಂಕಿನ ಪ್ರಕರಣಗಳು ಮತ್ತು 323 ಸಾವುಗಳು ದಾಖಲಾಗಿವೆ. ಕಳೆದ ಎರಡು ದಿನಗಳಿಂದ ಎರಡನೇ ಅತಿ ಹೆಚ್ಚು ಕೋವಿಡ್-19 ಪ್ರಕರಣಗಳನ್ನು ಹೊಂದಿರುವ ರಾಜ್ಯವಾದ ಗುಜರಾತ್, ಸೋಂಕಿನ ತೀವ್ರ ಹೆಚ್ಚಳಕ್ಕೆ ಸಾಕ್ಷಿಯಾಗಿದೆ, ಇದುವರೆಗಿನ 3,071 ಮತ್ತು 133 ಸಾವುಗಳು ಇಲ್ಲಿ ಸಂಭವಿಸಿವೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರಕರಣ ಸಂಖ್ಯೆ ಹೆಚ್ಚಾಗಿದ್ದು, ಸೋಂಕಿತರ ಸಂಖ್ಯೆ 2,625ಕ್ಕೆ ಏರಿಕೆಯಾಗಿದೆ, ಸಾವಿನ ಸಂಖ್ಯೆ 54ಕ್ಕೆ ತಲುಪಿದೆ. ಇದೇ ವೇಳೆ ಮಧ್ಯಪ್ರದೇಶದಲ್ಲಿ ಒಟ್ಟು 2,096 ಕೋವಿಡ್ ಪ್ರಕರಣಗಳು ಮತ್ತು 99 ಸಾವು ಸಂಭವಿಸಿದೆ. ರಾಜಸ್ಥಾನದಲ್ಲಿ ಸೋಂಕಿತರ ಸಂಖ್ಯೆ 2,083 ತಲುಪಿದ್ದು, 33 ಸಾವು ಸಂಭವಿಸಿದೆ. ತಮಿಳುನಾಡಿನಲ್ಲಿ 1,821 ಸೊಂಕಿತರು ಮತ್ತು 23 ಸಾವು ಉಂಟಾಗಿದೆ. ಉತ್ತರ ಪ್ರದೇಶದಲ್ಲಿ ಪ್ರಕರಣಗಳ ಸಂಖ್ಯೆ 1,793 ಆಗಿದ್ದು, ಇದುವರೆಗೆ 27 ಸಾವುಗಳು ವರದಿಯಾಗಿವೆ.





