ಮಂಜೇಶ್ವರ: ಕೊರೊನಾ ಆತಂಕ ಒಂದೆಡೆಯಾದರೆ ಒಪ್ಪೊತ್ತಿನ ಊಟಕ್ಕೆ ಗತಿಯಿಲ್ಲದೆ ಸಹಸ್ರಾರು ಮಂದಿ ಮತ್ತೊಂದೆಡೆ. ಉಪವಾಸ ಬಿದ್ದಿರುವ ಈ ಮಂದಿಗೆ ವಿವಿಧ ರೀತಿಯಲ್ಲಿ ಆಹಾರ ಪೂರೈಸುವ ಪ್ರಯತ್ನವನ್ನು ಸರ್ಕಾರ, ಸ್ಥಳೀಯಾಡಳಿ ಸಂಸ್ಥೆಗಳು ಮಾಡುತ್ತಿವೆಯಾದರೂ ಸಾಕಾಗುತ್ತಿಲ್ಲ ಎಂಬ ಕೂಗು ಕೇಳಿಬಂದಿದೆ. ಇಂಥಾ ಸ್ಥಿತಿಯಲ್ಲಿ ಸರ್ಕಾರ ಮಾಡಬೇಕಾದ ಜವಾಬ್ದಾರಿಯನ್ನು ಹೊತ್ತು ಪ್ರತಿನಿತ್ಯ 300 ರಷ್ಟು ಮಂದಿಗೆ ಬಿಸಿಯೂಟ ವಿತರಿಸುತ್ತಿರುವ ಮಂಜೇಶ್ವರ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನಶ್ಚೇತನ ಕೇಂದ್ರದ ಮಾನವೀಯ ಸೇವೆಯು ಗಮನ ಸೆಳೆಯುತ್ತಿದೆ.
ಉಪ್ಪಳ ಮಣಿಮುಂಡ ಪ್ರದೇಶದಲ್ಲಿ ನೆಲೆಸಿರುವ ಉತ್ತರ ಭಾರತದ ವಿವಿಧ ರಾಜ್ಯಗಳಾದ ಉತ್ತರ ಪ್ರದೇಶ, ಒಡಿಸ್ಸಾ, ಬಿಹಾರ, ಅಸ್ಸಾಂ ರಾಜ್ಯಗಳ 300 ರಷ್ಟು ಅತಿಥಿ ಕಾರ್ಮಿಕರು ಪ್ರಸ್ತುತ ಸ್ನೇಹಾಲಯದ ಸ್ನೇಹಸ್ಪಂದನೆಯಿಂದಾಗಿ ಭೀತಿಯ ನಡುವೆಯೂ ಹೊಟ್ಟೆ ತುಂಬಾ ಉಣ್ಣುತ್ತಿದ್ದಾರೆ. ಕಳೆದ ಎರಡು ವಾರಗಳಿಂದ ಸ್ನೇಹಾಲಯವು ಅನ್ನದಾನ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಕಾರ್ಮಿಕರು ವಾಸವಾಗಿರುವ ಪ್ರದೇಶಕ್ಕೆ ಪ್ರತಿನಿತ್ಯ ಸಂಜೆ ಆಹಾರ ವಿತರಿಸಲಾಗುತ್ತಿದೆ.
ಈ ಪ್ರದೇಶದಲ್ಲಿ ಹೇರಳ ಸಂಖ್ಯೆಯಲ್ಲಿ ನೆಲೆಸಿರುವ ಬಡ ಅತಿಥಿ ಕಾರ್ಮಿಕರು ಆಹಾರವಿಲ್ಲದ ದೀನ ಪರಿಸ್ಥಿತಿಗೆ ಬಿದ್ದಿರುವುದಾಗಿ ಯಾರೋ ಮಾನವ ಹೃದಯಿಗಳು ಕಳುಹಿಸಿದ ವ್ಯಾಟ್ಸಾಪ್ ಸಂದೇಶವನ್ನು ಗಮನಿಸಿದ ಸ್ನೇಹಾಲಯದ ಮುಖ್ಯಸ್ಥ ಜೋಸೆಫ್ ಕ್ರಾಸ್ತಾ ಅವರು ಈ ಸೇವೆಗೆ ಮುಂದಾಗಿದ್ದಾರೆ. ಎರಡು ವಾರಗಳಿಂದ ವಿತರಣೆ ಮುಂದುವರಿಯುತ್ತಿದ್ದು, ಲಾಕ್‍ಡೌನ್ ಸಂಪೂರ್ಣ ಹಿಂತೆಗೆದು ಇವರು ಕೆಲಸಕ್ಕೆ ಹೋಗಲು ಸಾಧ್ಯವಾಗುವ ವರೆಗೆ ನಾವು ಆಹಾರ ನೀಡುವುದಾಗಿ ಜೋಸೆಫ್ ಕ್ರಾಸ್ತಾ ತಿಳಿಸಿದ್ದಾರೆ.
ಬೀದಿ ಬದಿಯಲ್ಲಿ ಬಿದ್ದು ಕಮರುತ್ತಿರುವ ಮಾನಸಿಕ ರೋಗಿಗಳನ್ನು ಎತ್ತಿ ತಂದು ಅವರಿಗೆ ಪುನರ್ವಸತಿ ಕಲ್ಪಿಸುತ್ತಿರುವ ಸ್ನೇಹಾಲಯವು ಕಳೆದ ಅನೇಕ ವರ್ಷಗಳಿಂದ ಮಂಗಳೂರಿನ ವೆನ್‍ಲಾಕ್ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗುವ ರೋಗಿಗಳ ಸಹಾಯಕರಿಗೆ ಪ್ರತಿನಿತ್ಯ ಮಧ್ಯಾಹ್ನ ಊಟ ವಿತರಿಸುವ ಕಾರ್ಯದಲ್ಲೂ ತೊಡಗಿಸಿಕೊಂಡಿದೆ.


