ಇಂದಿನ ಮೂರು ಟಿಪ್ಪಣಿಗಳು ಇಲ್ಲಿವೆ.
೧. ಸಾಂಸ್ಕೃತಿಕ ರಾಜಧಾನಿಯನ್ನೂ ತಟ್ಟಿದ ಆ-ಹಾಕಾರ!
ಅಕ್ಕಿಗೆ ಏಕೆ ಜ್ವರ ಬಂದಿತು? “ಅಕ್ಕಿಯ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ" ಗಾದೆಯಿಂದ ಇರಬಹುದೇ? ಅಥವಾ, “ಅಕ್ಕಿಯಲ್ಲಿ ಕಾರ್ಬ್ಸ್ ಹೆಚ್ಚು ಆದ್ದರಿಂದ ನಾವು ಅಕ್ಕಿ ಬಳಸುವುದನ್ನು ನಿಲ್ಲಿಸಿದ್ದೇವೆ, ಬದಲಿಗೆ ಸಿರಿಧಾನ್ಯ ಬಳಸುತ್ತೇವೆ" ಎಂಬುವವರ ಮಾತುಗಳಿಂದ ನೊಂದು ಇರಬಹುದೇ?
ಯಾವುದೂ ಅಲ್ಲ. ದೀಪ ಆರಿತು ಎನ್ನಲು ದೀಪ ‘ಹಾ’ರಿತು ಎಂದು ಬರೆಯುವ, ಆಲುಗಡ್ಡೆ ದರ ರೂ.೭೦ ಎನ್ನಲು ‘ಹಾ’ಲುಗಡ್ಡೆ ದರ ರೂ.೭೦ ಎಂದು ಬರೆಯುವ, ಗ್ಯಾಸ್ ಸಿಲಿಂಡರ್ ಬೆಲೆ ಅಗ್ಗ ಎನ್ನಲಿಕ್ಕೆ ಗ್ಯಾಸ್ ಸಿಲಿಂಡರ್ ಬೆಲೆ ಹಗ್ಗ ಎಂದು ಬರೆಯುವ ಕನ್ನಡದ ಸುದ್ದಿವಾಹಿನಿಗಳ ಆ-ಹಾಕಾರ ಈಗ ಕೋವಿಡ-೧೯ ಸಾಂಕ್ರಾಮಿಕದಂತೆ ಎಲ್ಲೆಡೆ ಹಬ್ಬುತ್ತಿರುವುದರಿಂದ (ಹೆಲ್ಲೆಡೆ ಅಬ್ಬುತ್ತಿರುವುದರಿಂದ?) ಮೈಸೂರು ಮಹಾನಗರ ಪಾಲಿಕೆಯ ಪ್ರಕಟಣೆಯಲ್ಲೂ ಆ-ಹಾಕಾರ ಉಂಟಾಗಿದೆ!
“ಮೈಸೂರು ನಗರಾದ್ಯಂತ ಕೋಳಿ ಮಾಂಸ ಮಾರಾಟವನ್ನು ನಡೆಸುವ ಬಗ್ಗೆ" ಒಂದು ಪ್ರಕಟಣೆ ಮೊನ್ನೆ ಏಪ್ರಿಲ್ ೨ರಂದು ಪ್ರಕಟವಾಗಿದೆ. “ದಿನಾಂಕ 16-03-2020ರಂದು ಕುಂಬಾರ ಕೊಪ್ಪಲಿನ ವ್ಯಾಪ್ತಿಯಲ್ಲಿ ಅಕ್ಕಿ ಜ್ವರ ಕಾಣಿಸಿಕೊಂಡಿದ್ದು, ಈ ಕಾರಣದಿಂದಾಗಿ ಕೋಳಿ ಮಾಂಸ ಮಾರಾಟವನ್ನು ರದ್ದುಗೊಳಿಸಲಾಗಿತ್ತು. ಆದರೆ ದಿನಾಂಕ: 28-03-2020ರಂದು ಉಪ ನಿರ್ದೇಶಕರು, ಪಶುಪಾಲನಾ ಇಲಾಖೆ, ಮೈಸೂರು ರವರು ಪ್ರಸ್ತುತ ಸದರಿ ಪ್ರದೇಶದಲ್ಲಿ ಯಾವುದೇ ರೋಗೋದ್ರೇಕವು ಇರುವುದಿಲ್ಲ ಎಂದು ಮಾಹಿತಿ ಸಲ್ಲಿಸಿರುತ್ತಾರೆ." ಎಂದು ಬರೆದದ್ದಿದೆ ಆ ಪ್ರಕಟಣೆಯಲ್ಲಿ. ಕೆಳಗಡೆ ಮೈಸೂರು ಮಹಾನಗರ ಪಾಲಿಕೆ ಆಯುಕ್ತರ ಸಹಿ, ಹಸುರು ಶಾಯಿಯಿಂದ ಹಾಕಿದ್ದು (ಅವರೊಬ್ಬ ಗಜೆಟೆಡ್ ಆಫೀಸರ್ ಆದ್ದರಿಂದ), ಇದೆ. [ಗಮನಿಸಿ ಕಳುಹಿಸಿದವರು: ಶಿಲ್ಪಾ, ಮೈಸೂರು]
ಕನ್ನಡ ನಾಡಿನ ಸಾಂಸ್ಕೃತಿಕ ರಾಜಧಾನಿ ಎಂಬ ಖ್ಯಾತಿಯ ಮೈಸೂರಿನಲ್ಲಿ, ಅಲ್ಲಿಯ ಮಹಾನಗರ ಪಾಲಿಕೆಯ ಪ್ರಕಟಣೆಯಲ್ಲಿ, ಹಕ್ಕಿ ಅಕ್ಕಿ ಆಗಿದೆ ಎಂದರೆ ಪರಿಸ್ಥಿತಿ ಎಷ್ಟು ಉಲ್ಬಣಿಸಿದೆ ಎಂದು ಗೊತ್ತಾಗುತ್ತದೆ.
ಅದಿರಲಿ, ಈ ಪರಿಸ್ಥಿತಿಯನ್ನು ಗಮನಿಸಿ ಸ್ವರ್ಗದಲ್ಲೇನಾಯ್ತು ಗೊತ್ತೇ? ದ.ರಾ.ಬೇಂದ್ರೆಯವರು “ಅಕ್ಕಿ ಆರುತಿದೆ ನೋಡಿದಿರಾ" ಎಂದು ತಮ್ಮ ಕವಿತೆಯ ಸಾಲನ್ನು ಬದಲಾಯಿಸಿಕೊಂಡರು. ತಡಮಾಡದೆ ಕೆ.ಎಸ್.ನರಸಿಂಹ ಸ್ವಾಮಿಯವರು “ಹಕ್ಕಿ ಹಾರಿಸುವಾಗ ಚಿಕ್ಕ ನುಚ್ಚಿನ ನಡುವೆ ಬಂಗಾರವಿಲ್ಲದ ಬೆರಳು" ತೋರಿಸಿದರು. ಬದಲಾವಣೆಯ ಪರ್ವ!
===
೨. ಪತ್ರಿಕೆಗಳ ತಲೆಬರಹಗಳಲ್ಲಿ ಸರಿ-ತಪ್ಪು
ಅ) “ಗ್ರಾಮೀಣರಿಗೆ ಹುಳು ತಿಂದ ಗೋಧಿ" [ಹೊಸದಿಗಂತ. ೬ಏಪ್ರಿಲ್೨೦೨೦. ಗಮನಿಸಿ ಕಳುಹಿಸಿದವರು: ಪ್ರಭುಸ್ವಾಮಿ, ಪೀಣ್ಯ]. ಇದು ಸರಿಯಾಗಿಯೇ ಇದೆ. “ಹುಳು ತಿಂದ ಗೋಧಿ" ಈ ವಾಕ್ಯದಲ್ಲಿ ಹುಳುವೇ ಗೋಧಿಯನ್ನು ತಿಂದಿರುವುದೆಂದು ಅರ್ಥ. ಗೋಧಿಯು ಹುಳುವನ್ನು ತಿಂದಿತೇ? ಎಂಬ ಪ್ರಶ್ನೆ ಬರಲಿಕ್ಕೆ ಸಾಧ್ಯವೇ ಇಲ್ಲ. ಏಕೆಂದರೆ, ಕೆಲ ವಾರಗಳ ಹಿಂದೆ ಸ್ವಚ್ಛ ಭಾಷೆ ಕಲಿಕೆ ೯೩ರಲ್ಲಿ ವಿವರಿಸಿರುವಂತೆ- ಸಕರ್ಮಕ ಕ್ರಿಯೆಯನ್ನು ಸೂಚಿಸುವ ವಾಕ್ಯದಲ್ಲಿ ಎರಡೂ ನಾಮಪದಗಳು ಸಜೀವ ಮತ್ತು ಚಲಿಸಬಲ್ಲವುಗಳಾಗಿದ್ದರೆ ಕರ್ಮಸೂಚಕ ವಿಭಕ್ತಿಪ್ರತ್ಯಯ ಬೇಕೇಬೇಕು. ಒಂದು ನಾಮಪದ ಮಾತ್ರ ಸಜೀವಿಯದಾಗಿದ್ದರೆ ಕರ್ಮಸೂಚಕ ವಿಭಕ್ತಿಪ್ರತ್ಯಯ ಬೇಕಾಗಿಲ್ಲ. ಎರಡೂ ನಾಮಪದಗಳು ನಿರ್ಜೀವ ವಸ್ತುಗಳದಾಗಿದ್ದರೂ ಬೇಕಾಗಿಲ್ಲ. “ಹುಳು ತಿಂದ ಗೋಧಿ"- ಇಲ್ಲಿ ಹುಳು ಸಜೀವ ಮತ್ತು ಚಲಿಸಬಲ್ಲದ್ದು. ಗೋಧಿ ನಿರ್ಜೀವ. ಆದ್ದರಿಂದ “ಹುಳು ತಿಂದ ಗೋಧಿ" ಅಂದರೆ ಹುಳುವೇ ಗೋಧಿಯನ್ನು ತಿಂದಿರುವುದೆಂದು ಅರ್ಥ. ಈ ಶೀರ್ಷಿಕೆ ಸರಿ ಇರುವುದರಿಂದಲೇ, “ಅಜ್ಜಿ ಕೊಂದ ಆನೆ", “ಗಾಂಧಿ ಬೈದ ಭೈರಪ್ಪ", “ಹಸು ತಿಂದ ಚಿರತೆ", “ಪತ್ನಿ ಕೊಂದ ಪತಿ", “ಭಾರತ ಸೋಲಿಸಿದ ಆಸ್ಟ್ರೇಲಿಯಾ", "ಮೋದಿ ಶ್ಲಾಘಿಸಿದ ಡಬ್ಲ್ಯುಎಚ್‌ಒ" ಮುಂತಾದ ಶೀರ್ಷಿಕೆಗಳು ತಪ್ಪು ಆಗುವುದು. ಈ ವಿಷಯದಲ್ಲಿ ಹೊಸ ದಿಗಂತ ಪತ್ರಿಕೆಯನ್ನು ನೋಡಿ ಇತರ ಪತ್ರಿಕೆಗಳು ಕಲಿಯುವಂತಾಗಲಿ.
ಆ) “ಕರೊನಾ ಗೆಲ್ಲುವುದೇ ನಮ್ಮ ಸಂಕಲ್ಪ" [ವಿಜಯವಾಣಿ. ೭ಏಪ್ರಿಲ್೨೦೨೦. ಗಮನಿಸಿ ಕಳುಹಿಸಿದವರು: ಬೆಂಗಳೂರಿನಿಂದ ಪ್ರದೀಪ್ ಜೋಶಿ]. ಆಯ್ತಲ್ಲ! ಪ್ರಪಂಚದಲ್ಲಿ ಇಷ್ಟೆಲ್ಲ ಕರಾಳ ಛಾಯೆ ಹರಡಿರುವಾಗಲೂ ಕನ್ನಡದ ನಂ.೧ ಪತ್ರಿಕೆಗೆ ಕರೊನಾ ವೈರಸ್ಸೇ ಗೆಲ್ಲಬೇಕೆಂಬ ಆಸೆಯಂತೆ. ಅದಕ್ಕಾಗಿ ಸಂಕಲ್ಪ ಬೇರೆ ಮಾಡಿದ್ದಾರಂತೆ! ಪ್ರಧಾನಿ ಮೋದಿಯವರು ಹಾಗೆಂದರು ಅಂತ ಸುಮ್ಮನೆ ಅವರ ಮೇಲೆ ದೂರಿದ್ದಾರೆ. ಈ ರೀತಿ ಬರೆದರೆ ತಪ್ಪು ಅರ್ಥ ಕೊಡುತ್ತದೆಂಬ ಯೋಚನೆಯೇ ಬರುವುದಿಲ್ಲವೇ ಈ ಪತ್ರಕರ್ತರಿಗೆ!?
ಇ) “ವಯೋ ನಾಗರಿಕರಿಗೆ ಅಗತ್ಯ ವಸ್ತು ರವಾನೆ" [ಉದಯವಾಣಿ. ೪ಏಪ್ರಿಲ್೨೦೨೦. ಗಮನಿಸಿ ಕಳುಹಿಸಿದವರು: ಆಸ್ಟ್ರೋ ಮೋಹನ್]. ವಯೋವೃದ್ಧರು ಎಂಬ ಪದಬಳಕೆ ಇದೆ. ವಯೋಸಹಜ ಎಂಬ ಪದಬಳಕೆ ಇದೆ (ಉದಾ: “ಆತನದು ವಯೋಸಹಜ ಚಂಚಲ ಸ್ವಭಾವ."). ಇದೇನಿದು "ವಯೋ ನಾಗರಿಕ"? ಸಂಸ್ಕೃತದಲ್ಲಿ ‘ವಯೋ’ ಎಂಬ ಪದಬಳಕೆ ಉಪಸರ್ಗದ ರೀತಿಯಲ್ಲಿ ‘ವಯಸ್ಸಿನಿಂದಾಗಿ’ ಎಂಬ ಅರ್ಥದಲ್ಲಿ ಆಗುತ್ತದೆ. ಹಾಗಾದರೆ “ವಯೋ ನಾಗರಿಕ" ಅಂದರೆ “ವಯಸ್ಸಿನಿಂದಾಗಿ ನಾಗರಿಕ" ಅಂತಾಯ್ತು. ಬೇರೆಲ್ಲ ವಿಧಗಳಲ್ಲಿ ಅನಾಗರಿಕ? ಉದಯವಾಣಿಗೇ ಗೊತ್ತು! ಅದಕ್ಕಿಂತ, “ವೃದ್ಧ ನಾಗರಿಕರಿಗೆ ಅಗತ್ಯ ವಸ್ತು ರವಾನೆ" ಅಥವಾ “ಹಿರಿಯ ನಾಗರಿಕರಿಗೆ ಅಗತ್ಯ ವಸ್ತು ರವಾನೆ" ಎಂದು ಬರೆದಿದ್ದರೆ ಏನೂ ತಪ್ಪಾಗುತ್ತಿರಲಿಲ್ಲ, ಯಾರೂ ತಪ್ಪಾಗಿ ಭಾವಿಸುತ್ತಿರಲಿಲ್ಲ. ಉದಯವಾಣಿಯಲ್ಲಿ, ಅದರಲ್ಲೂ ಮಣಿಪಾಲ ಆವೃತ್ತಿಯಲ್ಲಿ, ತಪ್ಪುಗಳು ಕಂಡುಬಂದರೆ ಶಾಲೆಯಲ್ಲಿ ಮುಂದಿನ ಬೆಂಚಿನಲ್ಲಿ ಕುಳಿತುಕೊಳ್ಳುವ ಆದರ್ಶ ವಿದ್ಯಾರ್ಥಿಯ ಬರವಣಿಗೆಯಲ್ಲಿ ತಪ್ಪುಗಳಾಗುವುದಕ್ಕೆ ಸಮಾನ.
ಈ) “ಕುರುಬರ ಎಸ್ಟಿಗೆ ಸೇರಿಸಲು ಹೋರಾಟ" [ಕನ್ನಡಪ್ರಭ. ೨೨ಮಾರ್ಚ್೨೦೨೦. ಗಮನಿಸಿ ಕಳುಹಿಸಿದವರು: ಹುಬ್ಬಳ್ಳಿಯಿಂದ ಅನಂತರಾಜ ಮೇಲಾಂಟ]. ಎಸ್ಟಿ ಅಂದರೆ ಎಸ್.ಟಿ. Scheduled Tribe. ಪರಿಶಿಷ್ಟ ಪಂಗಡ. ಕುರುಬರ ಎಸ್ಟಿ ಅಂದರೇನು? ಅದು ಬಹುಶಃ “ಕುರುಬರನ್ನು ಎಸ್ಟಿಗೆ ಸೇರಿಸಲು ಹೋರಾಟ" ಎಂದು ಇರಬೇಕಿತ್ತು. ದ್ವಿತೀಯಾ ವಿಭಕ್ತಿ ಪ್ರತ್ಯಯ ಬಳಸಿ ‘ಕುರುಬರನ್ನು’ ಎಂದು ಬರೆಯಬೇಕಿರುವಲ್ಲಿ ಷಷ್ಠೀ ವಿಭಕ್ತಿ ಪ್ರತ್ಯಯ ಬಳಸಿ ‘ಕುರುಬರ’ ಎಂದು ಬರೆದರೆ ತಪ್ಪು ಅರ್ಥ ಬರುವುದಿಲ್ಲವೇ? ಅಂತೂ ತಲೆಬರಹದಲ್ಲಿ ವಿಭಕ್ತಿಪ್ರತ್ಯಯ ಬಳಸಲೇಬಾರದು, ಅದರಲ್ಲೂ ದ್ವಿತೀಯಾ ವಿಭಕ್ತಿಪ್ರತ್ಯಯ ಬಳಸಿದರೆ ಪ್ರಳಯವೇ ಆಗುತ್ತದೆ ಎಂದು ಯಾರೋ ಬುರುಡೆ ಜ್ಯೋತಿಷಿ ಈ ಪತ್ರಕರ್ತರ ಕಿವಿಯೂದಿದ್ದಾನೋ ಏನೋ.
ಉ) “ಗಡಿಭದ್ರತಾ ಪಡೆಯ ಸಭೆಯಲ್ಲಿ ಇಬ್ಬರು ಬಿಎಸ್ಸೆಫ್‌ನವರು" [ಹೊಸದಿಗಂತ. ೩ಏಪ್ರಿಲ್೨೦೨೦. ಗಮನಿಸಿ ಕಳುಹಿಸಿದವರು: ಸಾವಿತ್ರಿ ಕಾಯರ್ಪಾಡಿ]. ಇದು ಹೇಗೆ ಸುದ್ದಿಯಾಗುತ್ತದೆ? ಬಿಎಸ್ಸೆಫ್ ಅಂದರೆ ಬಾರ್ಡರ್ ಸೆಕ್ಯುರಿಟಿ ಫೋರ್ಸ್. ಕನ್ನಡದಲ್ಲಿ ‘ಗಡಿಭದ್ರತಾ ಪಡೆ’. ಅದರ ಸಭೆಯಲ್ಲಿ ಅವರು ಭಾಗವಹಿಸದಿದ್ದರೆ ಸುದ್ದಿಯಾಗಬೇಕೇ ವಿನಾ ಭಾಗವಹಿಸಿದರೆ ಸುದ್ದಿ ಹೇಗಾಗುತ್ತದೆ? ವಿಷಯ ಬೇರೆಯೇ ಇದೆ. ಸುದ್ದಿಯ ವಿವರ ಓದಿದರೆ ಗೊತ್ತಾಗುತ್ತದೆ. ದೆಹಲಿಯ ನಿಜಾಮುದ್ದೀನ್ ಜಮಾತ್ ಮಸೀದಿಯ ಧಾರ್ಮಿಕ ಸಭೆಯಲ್ಲಿ ಗಡಿಭದ್ರತಾ ಪಡೆಯ ಇಬ್ಬರು ಯೋಧರು ಭಾಗವಹಿಸಿದ್ದರಂತೆ. ದೇಶದಲ್ಲಿ ಲಾಕ್‌ಡೌನ್ ಇರುವಾಗಲೂ ಒಟ್ಟುಸೇರಿದ ಆ ಧರ್ಮಾಂಧರ ಸಭೆಯನ್ನು “ಗಡಿಭದ್ರತಾ ಪಡೆಯ ಸಭೆ" ಎಂದು ಗುರುತಿಸಿದೆ ಪತ್ರಿಕೆ! ಏನೆನ್ನಬೇಕು ಇಂತಹ ದುಡುಕಿಗೆ?
===
೩. ಪದೇ ಪದೇ ತಪ್ಪಾಗಿ ಕಾಣಿಸಿಕೊಳ್ಳುವ ಪದಗಳು
ಅ) ಟೀಕೆ ಸರಿ. ವ್ಯಾಖ್ಯಾನ, ವಿವರಣೆ, ಸ್ಪಷ್ಟಪಡಿಸುವಿಕೆ ಇತ್ಯಾದಿ ಅರ್ಥ. ಹೊಗಳಿಕೆ ತೆಗಳಿಕೆ ಇಲ್ಲದೆ ನಿರ್ಲಿಪ್ತಭಾವದ ಟಿಪ್ಪಣಿ. ಮೂಲ ಸಂಸ್ಕೃತದಲ್ಲೂ ಅಲ್ಪಪ್ರಾಣಾಕ್ಷರ ಬಳಸಿ ‘ಟೀಕಾ’ ಎಂದೇ ಬರೆಯುವುದು. ಕನ್ನಡದಲ್ಲಿ ಕೆಲವರು ‘ಠೀಕೆ’ ಎಂದು ತಪ್ಪಾಗಿ ಬರೆಯುತ್ತಾರೆ, ಕಟುವಾದ ತೆಗಳಿಕೆ ಎಂದಾಗಲಿ ಎಂಬ ತಪ್ಪು ಭಾವನೆಯಿಂದ ಇರಬಹುದು.
ಆ) ಅರ್ಬುದ ಸರಿ. ದುರ್ಮಾಂಸ ಬೆಳೆದುಕೊಳ್ಳುವ ಒಂದು ಬಗೆಯ ವ್ರಣರೋಗ. ಸಾಮಾನ್ಯವಾಗಿ ಕ್ಯಾನ್ಸರ್‌ಗೆ ಹಾಗೆನ್ನುತ್ತಾರೆ. ಆದರೆ ಅರ್ಭುದ, ಅರ್ಬುಧ ಅಂತೆಲ್ಲ ಮಹಾಪ್ರಾಣಾಕ್ಷರಗಳನ್ನು ಬಳಸಿ ಬರೆದರೆ ತಪ್ಪು.
ಇ) ಡಕಾಯಿತಿ ಸರಿ. ಕಳ್ಳತನ, ದರೋಡೆ. ಡಾಕು( = ಕಳ್ಳ) ಮಾಡಿದ್ದು ಡಕಾಯಿತಿ. ಡಾಕಾಯಿತಿ ಎಂಬ ರೂಪವೂ ಇದೆ. ಆದರೆ ಡಕಾಯತಿ ಎಂದು ಬರೆಯುವುದು ತಪ್ಪು. ಪ್ರಜಾವಾಣಿ, ವಿಜಯಕರ್ನಾಟಕ ಮುಂತಾದ ಪತ್ರಿಕೆಗಳಲ್ಲೂ ಈ ತಪ್ಪು ರೂಪ ಆಗಾಗ ಕಾಣಿಸುತ್ತದೆ. ರಿಯಾಯಿತಿ (discount), ವಿನಾಯಿತಿ(exemption) ಸಹ ಹೀಗೆಯೇ. ರಿಯಾಯತಿ, ವಿನಾಯತಿ ಎಂದು ಬರೆಯಬಾರದು.
ಈ) ಸೌದಾಮನೀ ಸರಿ. ಮಿಂಚು ಅಥವಾ ವಿದ್ಯುತ್ ಎಂದು ಅರ್ಥ. ಒಬ್ಬ ಅಪ್ಸರೆಯ ಹೆಸರು ಕೂಡ ಸೌದಾಮನೀ ಎಂದು ಇದೆ. ಸೌದಾಮಿನೀ ಎಂದು ಬರೆದರೂ ಸರಿಯೇ. ಆದರೆ ಸೌಧಾಮನಿ, ಸೌಧಾಮಿನಿ ಅಂತೆಲ್ಲ ಬರೆದರೆ ತಪ್ಪು.
ಉ) ಸೈರಂಧ್ರೀ ಸರಿ. ಹೊಲಿಗೆ, ಕಸೂತಿ ಮುಂತಾದ ಕರಕುಶಲ ಕಾರ್ಯಗಳನ್ನು ಮಾಡುತ್ತ ಸ್ವತಂತ್ರಳಾಗಿರುವ ಹೆಂಗುಸು. ಸೈರಂದ್ರಿ ಎಂದು ಅಲ್ಪಪ್ರಾಣಾಕ್ಷರ ಬಳಸಿ ಬರೆದರೆ ತಪ್ಪು. ‘ರಂಧ್ರ’- ಸೂಜಿಯನ್ನು ಬಟ್ಟೆಯ ಮೇಲೆ ಬಳಸುವಾಗ ರಂಧ್ರ ಆಗಿಯೇ ಆಗುತ್ತದೆ, ಅಂತಹ ಕರಕುಶಲ ಕಲೆಯವಳು ಸೈ‘ರಂಧ್ರೀ’. ಸಂಸ್ಕೃತ ಪದಗಳ ರಚನೆ ಹೇಗಿರುತ್ತದೆ ನೋಡಿ!
ಬರಹ:ಶ್ರೀವತ್ಸ ಜೋಶಿ ವಾಶಿಂಗ್ಟನ್ ಡಿ.ಸಿ.




