ಕಾಸರಗೋಡು: ಚೆಂಗಳ ನಲ್ತಡ್ಕ ಮರ್ದಂವಯಲ್ ಅಬ್ದುಲ್ ಖಾದರ್ ಬೆಳೆದ ಐದು ಟನ್ ಕುಂಬಳಕಾಯಿಯನ್ನು ಕೃಷಿ ಇಲಾಖೆಯ ಹಾರ್ಟಿ ಕಾರ್ಪ್ ಮುಖಾಂತರ ಖರೀದಿಸಲು ತೀರ್ಮಾನಿಸಿದ್ದು, ಕೃಷಿಕರಿಗೆ ನೆಮ್ಮದಿ ನೀಡಿದೆ.
ಕೊರೊನಾ ಹಾವಳಿಯ ಹಿನ್ನೆಲೆಯಲ್ಲಿ ಜಾರಿಗೊಳಿಸಿದ ಲಾಕ್‍ಡೌನ್‍ನಿಂದ ಬೆಳೆದ ಕುಂಬಳಕಾಯಿಯನ್ನು ಮಾರಾಟ ಮಾಡಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಕೃಷಿಕರಾದ ಅಬ್ದುಲ್ ಖಾದರ್ ಚಿಂತಿತರಾಗಿದ್ದರು.
ಕುಂಬಳಕಾಯಿ ಉಳಿದುಕೊಂಡಿರುವ ಬಗ್ಗೆ ಮಾಹಿತಿಯಿಂದ ಕೃಷಿ ಸಚಿವ ವಿ.ಎಸ್.ಸುನಿಲ್ ಕುಮಾರ್ ಅವರ ನಿರ್ದೇಶದಂತೆ ಕೃಷಿ ಇಲಾಖೆಯ ಹಾರ್ಟಿ ಕಾರ್ಪ್ ಕುಂಬಳಕಾಯಿಯನ್ನು ಖರೀದಿಸುತ್ತಿದೆ. ಪ್ರಿನ್ಸಿಪಲ್ ಕೃಷಿ ಅಧಿಕಾರಿ ಕೆ.ಸಜಿನಿ ಮೋಳ್, ಡೆಪ್ಯೂಟಿ ಡೈರೆಕ್ಟರ್ ಆರ್.ವೀಣಾರಾಣಿ, ಅಸಿಸ್ಟೆಂಟ್ ಡೈರೆಕ್ಟರ್ ಕೆ.ಎನ್.ಜ್ಯೋತಿ ಕುಮಾರಿ, ಕಾಸರಗೋಡು ಕೃಷಿ ಅಸಿಸ್ಟೆಂಟ್ ಡೈರೆಕ್ಟರ್ ಕೆ.ಆನಂದ, ಕೃಷಿ ಅಧಿಕಾರಿ ಎಸ್.ಎಸ್.ಸಜು ಅವರು ಕೃಷಿ ತೋಟಕ್ಕೆ ತೆರಳಿದ್ದರು.
ಇದೇ ರೀತಿ ಪುಲ್ಲೂರು ಮುತ್ತನಡ್ಕದ ಮಣಿಕಂಠನ್ ಬೆಳೆದ 70 ಕಿಲೋ ಸೌತೆ ಕಾಯಿಯನ್ನು ಖರೀದಿಸಿದೆ. ಉದುಮ ಪಂಚಾಯತ್‍ನ ಞಕ್ಲಿಯಲ್ಲಿ 10 ಸೆಂಟ್ಸ್ ಸ್ಥಳದಲ್ಲಿ ಪಿ.ವಿಜಯರಾಘವನ್ ಬೆಳೆದ ಹರಿವೆಯನ್ನು ಕೃಷಿ ಇಲಾಖೆ ಖರೀದಿಸಿದೆ.
ನಾಲ್ಕು ದಿನಗಳ ಹಿಂದೆಯಷ್ಟೇ ಬದಿಯಡ್ಕ ಬೈಕುಂಜದ ಶಂಕರನಾರಾಯಣ ಭಟ್ ಎಂಬವರು ಟನ್ ಗಟ್ಟಲೆ ಕುಂಬಳ ಬೆಳೆಸಿ ಮಾರುಕಟ್ಟೆಯ ಬಗ್ಗೆ ಚಿಂತಿತರಾಗಿದದಾಗ ಕೃಷಿ ಸಚಿವರ ಆದೇಶದ ಪ್ರಕಾರ ಹಾರ್ಟಿಕಾರ್ಪ್ ಖರೀದಿಸಿತ್ತು.


