ಕಾಸರಗೋಡು: ಚೆಮ್ನಾಡ್ ಗ್ರಾಮಪಂಚಾಯತ್ ನ ತೆಕ್ಕಿಲ್ ಗ್ರಾಮದಲ್ಲಿ ರಾಜ್ಯದೊಂದಿಗೆ ಸಹಕರಿಸಿ ಟಾಟಾ ಸಮೂಹ ಸಂಸ್ಥೆ ನಿರ್ಮಿಸುವ ಕೋವಿಡ್ ಆಸ್ಪತ್ರೆಯ ಅಂಗವಾಗಿ ನೆಲ ಸಮಗೊಳಿಸುವ ಕಾಮಗಾರಿ ಶನಿವಾರ ಆರಂಭಗೊಂಡಿದೆ. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ಸಮಕ್ಷದಲ್ಲಿ ಕಾಮಗಾರಿ ಆರಂಭಗೊಂಡಿದೆ. ಚಟ್ಟಂಚಾಲ್ ಮಲಬಾರ್ ಇಸ್ಲಾಮಿಕ್ ಕಾಲೇಜು ಬಳಿಯ 276,277 ಸರ್ವೇ ನಂಬ್ರಗಳಲ್ಲಿ ರುವ 5 ಎಕ್ರೆ ಕಂದಾಯ ಜಾಗದಲ್ಲಿ ಈ ಆಸ್ಪತ್ರೆ ನಿರ್ಮಿಸಲಾಗುತ್ತಿದೆ. 540 ಬೆಡ್, ಐಸೊಲೇಷನ್ ವಾರ್ಡ್ ಗಳು, ಐ.ಸಿ.ಯು. ಸಹಿತದ ಸೌಲಭ್ಯಗಳು ಈ ಆಸ್ಪತ್ರೆಯಲ್ಲಿರುವುದು. ಟಾಟಾ ಸಮೂಹ ಸಂಸ್ಥೆ ಕಟ್ಟಡ ನಿರ್ಮಾಣ ನಡೆಸಿ ರಾಜ್ಯ ಸರಕಾರಕ್ಕೆ ಹಸ್ತಾಂತರಿಸಲಿದೆ. ಜಿಲ್ಲೆಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಕೋವಿಡ್ 19 ಪ್ರಕರಣಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ಸಹಾಯ ಹಸ್ತದೊಂದಿಗೆ ಟಾಟಾ ಸಮೂಹ ಸಂಸ್ಥೆ ರಂಗಕ್ಕಿಳಿದಿದೆ.
ಒಂದೂವರೆ ತಿಂಗಳ ಅವಧಿಯಲ್ಲಿ ಟಾಟಾ ಕೋವಿಡ್ ಆಸ್ಪತ್ರೆ: ಜಿಲ್ಲಾಧಿಕಾರಿ:
ರಾಜ್ಯ ಸರಕಾರದೊಂದಿಗೆ ಸಹಕರಿಸಿ ಟಾಟಾ ಸಮೂಹ ಸಂಸ್ಥೆ ಚೆಮ್ನಾಡ್ ಗ್ರಾಮಪಂಚಾಯತ್ ನ ತೆಕ್ಕಿಲ್ ಗ್ರಾಮದಲ್ಲಿ ನಿರ್ಮಿಸಲಾಗುವ ಕೋವಿಡ್ ಆಸ್ಪತ್ರೆ ಒಂದೂವರೆ ತಿಂಗಳ ಅವಧಿಯಲ್ಲಿ ಪೂರ್ಣಗೊಳ್ಳಲಿದೆ ಎಂದು ಜಿಲ್ಲಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು.
ಜಿಲ್ಲಾಡಳಿತೆ ಗೆ ಆಸ್ಪತ್ರೆ ಕಾಮಗಾರಿ ಪೂರ್ಣಗೊಳಿಸಲು 2 ತಿಂಗಳ ಅವಧಿ ರಾಜ್ಯ ಸರಕಾರ ಮಂಜೂರು ಮಾಡಿದೆ. ಅದಕ್ಕೆ ಮುನ್ನವೇ ಕಾಮಗಾರಿ ಪೂರ್ಣಗೊಳ್ಳಲಿದೆ. ಜಾಗ ಸಮಗೊಳಿಸುವ ಕಾಮಗಾರಿ ಈಗ ನಡೆಯುತ್ತಿದೆ. ಈ ಪ್ರದೇಶದ ನೆಲ ಗಟ್ಟಿಯಾಗಿರುವ ಕಾರಣ ಸಮಗೊಳಿಸುವ ಕಾಯಕ ಒಂದು ತಿಂಗಳ ಕಾಲ ಬೇಕಾಗಬಹುದು ಎಂದು ಪರಿಣತರು ತಿಳಿಸಿದರು. ಆದರೂ ಹೆಚ್ಚುವರಿ ಕಾರ್ಮಿಕರು, ಯಂತ್ರಗಳನ್ನು ಬಳಸಿ 15 ದಿನಗಳಲ್ಲಿ ನೆಲಸಮಗೊಳಿಸುವ ಕಾಮಗಾರಿ ಜರುಗಲಿದೆ. ಆಸ್ಪತ್ರೆ ನಿರ್ಮಿಸುವ ಜಾಗ ಸಂಬಂಧ ಸಮಸ್ಯೆಗಳು ಈಗ ಪರಿಹಾರಗೊಂಡಿವೆ. ಇದಕ್ಕೆ ಟ್ರಸ್ಟ್ ಪದಾಧಿಕಾರಿಗಳ ಕಡೆಯಿಂದ ಉತ್ತಮ ಸಹಕಾರ ಲಭಿಸಿದೆ ಎಂದು ಜಿಲ್ಲಾಧಿಕಾರಿ ತಿಳಿಸಿರುವರು.


