ಉಪ್ಪಳ : ಕೋವಿಡ್19 ನಿಗ್ರಹಕ್ಕೆ ದೇಶ ವ್ಯಾಪ್ತಿ ಲಾಕ್ ಡೌನ್ ವಿಧಿಸಿದ ಪರಿಣಾಮ ಮನೆಯೊಳಗೆ ಕುಳಿತು ಬೇಸತ್ತ ಮಂದಿ ಹೆಚ್ಚಾಗಿ ಆಶ್ರಯಿಸುವುದು ಮೊಬೈಲ್ ನ್ನು. ಇದರಲ್ಲಿ ಟಿಕ್ ಟಾಕ್ ವಿಡಿಯೋ ಮಾಡಿ ಜಾಲತಾಣದಲ್ಲಿ ಹರಿಯ ಬಿಡುವ ಪರಿಪಾಠ ಇಂದಿನ ಯುವ ಜನತೆಯಲ್ಲಿ ಅಧಿಕವಾಗಿಯೂ ಕಂಡು ಬರುತ್ತದೆ. ಆದರೆ ಇಲ್ಲಿ ಇಬ್ಬರು ಪ್ರತಿಭಾನ್ವಿತರು ಲಾಕ್ ಡೌನ್ ಸಂದರ್ಭದಲ್ಲಿ ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚಿ ಅ ಮೂಲಕ ಮೆಚ್ಚುಗೆಯನ್ನು ಗಳಿಕೊಂಡ ರೀತಿ ವಿಶೇಷವಾಗಿದೆ.
ಮಂಜೇಶ್ವರ ಸಮೀಪದ ಉಪ್ಪಳ ಐಲದ ನಿವಾಸಿಗಳಾದ ವಿಜಯ ಮಯ್ಯ ಹಾಗೂ ಪ್ರಕಾಶ್ ಕುಮಾರ್ ಮಯ್ಯ ಈ ಇಬ್ಬರು ಯುವ ಪ್ರತಿಭೆಗಳು. ವಿಜಯ ಮಯ್ಯ ಶಾರದ ಆಟ್ರ್ಸ್ ಮಂಜೇಶ್ವರ ನಾಟಕ ತಂಡದ ವೃತ್ತಿಪರ ರಂಗ ನಟರಾದರೆ ಪ್ರಕಾಶ್ ಮಯ್ಯ ವೃತ್ತಿಯಲ್ಲಿ ಮಂಗಳೂರಿನಲ್ಲಿ ವಿಡಿಯೋ ಗ್ರಾಫರ್ ಮತ್ತು ಎಡಿಟರ್ ಆಗಿದ್ದಾರೆ.
ಲಾಕ್ ಡೌನ್ ನಿಂದಾಗಿ ನಾಟಕ ವೃತ್ತಿಗೂ,ವಿಡಿಯೋ ಗ್ರಾಫಿಂಗ್,ಎಡಿಟಿಂಗ್ ಕಾಯಕಕ್ಕೂ ಬೀಗ ಬಿದ್ದಾಗ ಇವರು ತಮ್ಮ ಹವ್ಯಾಸಕ್ಕೆ ಕಾವು ಕೊಟ್ಟರು.
ಇಬ್ಬರು ಸೇರಿ ಕೋರೊನಾ ಜಾಗೃತಿಯ ಬಗ್ಗೆ ಮನ ಮುಟ್ಟುವ ರೀತಿಯ ಕಥೆಗಳನ್ನು ಸಿದ್ಧಪಡಿಸಿ ಅದನ್ನು ತಮ್ಮದೇ ಮನೆ ಪರಿಸರದಲ್ಲಿ ಮೊಬೈಲ್ ಕ್ಯಾಮರ ಬಳಸಿ ಶೂಟಿಂಗ್ ನಡೆಸಿ ಮೊಬೈಲ್ ನಲ್ಲಿಯೇ ಎಡಿಟಿಂಗ್ ಮಾಡಿ ತಮ್ಮದೇ ಯೂಟ್ಯೂಬ್ ಲಿಂಕ್ ನಲ್ಲಿ ಹರಿಯಬಿಟ್ಟರು. ನೋಡು ನೋಡುತ್ತಿದ್ದಂತೆ ಇವರ ಈ ಪ್ರಾಯೋಗಿಕ ಪ್ರಯತ್ನಕ್ಕೆ ಜನ ಮೆಚ್ಚುಗೆ ಲಭಿಸ ತೊಡಗಿತು. ಇದರಿಂದಾಗಿ ಮನೆಯಲ್ಲಿಯೇ ಬೇಸತ್ತು ಕೂರುವುದಕ್ಕಿಂತ ದಿನಂಪ್ರತಿ ಒಂದೊಂದು ರೀತಿಯ ಕೋರೊನಾಕ್ಕೆ ಸಂಬಂಧಪಟ್ಟ ಕಥೆ ಚಿತ್ರಕಥೆಗಳನ್ನು ಬರೆದು ಸ್ವತಃ ತಾವೇ ಅಭಿನಯಿಸಿ ಸಂಕಲನಗೈದು ಹಂಚಿದರು. ಹೀಗೆ ಬರೋಬ್ಬರಿ ಹತ್ತು ವಿಡಿಯೋ ಗಳು ಇದೀಗ ಲಾಕ್ ಡೌನ್ ಸಂದರ್ಭದಲ್ಲಿ ತಯಾರಾಗಿ ಕೋರೋನದ ದಿನಗಳ ಬಗ್ಗೆ ಜನ ಜಾಗೃತಿಯೊಂದಿಗೆ ಸಾಮಾಜಿಕ ಸಂದೇಶಯುಕ್ತವಾಗಿ ನವಿರಾದ ಹಾಸ್ಯದೊಂದಿಗೆ ವೀಕ್ಷಕರ ಮನ ಸೆಳೆಯುವಲ್ಲಿ ಸಫಲವಾಗಿದೆ.
https://www.youtube.com/user/
ಐಲದ ಮಯ್ಯದ್ವಯರಿಂದ "ಅಯ್ಯಯ್ಯ..."ಎನ್ನುವ ಮನರಂಜನೀಯ ವಿಡಿಯೋ ವೈರಲ್ ಆಗುತ್ತಿದ್ದು ಇದೀಗ ಟಿವಿ ನೈನ್ ಕನ್ನಡ ಚಾನೆಲ್ ನಲ್ಲೂ ಎರಡು ಎಪಿಸೋಡ್ ಪ್ರಸಾರಗೊಂಡಿದೆ. ಲಾಕ್ ಡೌನ್ ಸಂದರ್ಭವನ್ನು ಹೀಗೂ ತಮ್ಮ ಪ್ರತಿಭಾ ಪ್ರದರ್ಶನದ ಜತೆಗೆ ಜನ ಜಾಗೃತಿಯ ಮನರಂಜನೆ ನೀಡಲು ಬಳಸಿಕೊಂಡಿರುವ ಮಯ್ಯದ್ವಯರಿಗೆ ವಿಶೇಷ ಚಾನೆಲ್ ನ ವಿಶೇಷ ಅಭಿನಂದನೆ ಸೂಚಿಸುತ್ತಾ ಮನೆಯಲ್ಲಿ ಸುಮ್ಮನೆ ಕೂರುವ ಬದಲು ಮನ ಮುದಗೊಳಿಸುವ ಇವರ ಪ್ರಯತ್ನವನ್ನು ನೀವು ನೋಡಿ ಅಭಿನಂದಿಸಿಸಬಹುದು.



