ಕಾಸರಗೋಡು: ನೆಲ್ಲಿಕಟ್ಟೆಯಲ್ಲಿ ಬೆಂಕಿ ತಗುಲಿ ಗಂಭೀರ ಗಾಯಗೊಂಡ ಮಕ್ಕಳ ಚಿಕಿತ್ಸೆಯ ಹೊಣೆಯನ್ನು ರಾಜ್ಯ ಸರ್ಕಾರ ವಹಿಸಲಿದೆ ಎಂದು ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಟೀಚರ್ ತಿಳಿಸಿದರು.
ಕೇರಳ ಸಮಾಜ ಸುರಕ್ಷಾ ಮಿಷನ್‍ನ ವಿ ಕೇರ್ ಯೋಜನೆಯ ಮೂಲಕ ಇವರ ಚಿಕಿತ್ಸಾ ವೆಚ್ಚ ವಹಿಸಲಾಗುವುದು ಎಂದವರು ನುಡಿದರು. ದಿನಗಳ ಹಿಂದೆ ನೆಲ್ಲಿಕಟ್ಟೆಯ ನಿವಾಸಿ ಎ.ಪಿ.ತಾಜುದ್ದೀನ್ ನಿಸಾಮಿ-ತ್ವಯಿಬ ದಂಪತಿಯ ಮಕ್ಕಳಾದ 13, 10 ಮತ್ತು 8 ವರ್ಷ ಪ್ರಾಯದ ಮೂವರು ಮಕ್ಕಳಿಗೆ ಬೆಂಕಿ ತಗುಲಿ ಗಂಭೀರ ಗಾಯವಾಗಿತ್ತು. ಇವರಲ್ಲಿ ದೇಹದ ಶೇ.90 ಭಾಗ ಸುಟ್ಟು ಹೋದ 8 ವರ್ಷ ಪ್ರಾಯದ ಬಾಲಕಿ ಕಲ್ಲಿಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ. 7 ನೇ ತರಗತಿಯಲ್ಲಿ ಮತ್ತು 4ನೇ ತರಗತಿಯಲ್ಲಿ ಕಲಿಕೆ ನಡೆಸುತ್ತಿರುವ ವಿದ್ಯಾರ್ಥಿಗಳಾದ ಇಬ್ಬರು ಮಕ್ಕಳು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಮನೆ ನಿರ್ಮಾಣ ನಡೆಸಿದ ಸಾಲವೇ ಇನ್ನೂ ಬಾಕಿಯಿದ್ದು, ಹೆತ್ತವರು ಇವರ ಚಿಕಿತ್ಸೆಗೆ ಗತ್ಯಂತರವಿಲ್ಲದೆ ಬಳಲುತ್ತಿದ್ದರು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಕೇರಳ ಸೋಷ್ಯಲ್ ಸೆಕ್ಯೂರಿಟಿ ಮಿಷನ್ ಜಿಲ್ಲಾ ಸಂಚಾಲಕ ಜಿಷೋ ಈ ಮಕ್ಕಳ ಚಿಕಿತ್ಸೆ ವೆಚ್ಚವನ್ನು ರಾಜ್ಯ ಸರ್ಕಾರ ವಹಿಸುವಂತೆ ಕ್ರಮಕೈಗೊಳ್ಳಬೇಕೆಂದು ಸಮಾಜ ನೀತಿ ಇಲಾಖೆಗೆ ಮನವಿ ಸಲ್ಲಿಸಿದ್ದರು. ಇದನ್ನು ಪರಿಶೀಲಿಸಿದ ಆರೋಗ್ಯ ಇಲಾಖೆ ಚಿಕಿತ್ಸೆಯ ಹೊಣೆಯನ್ನು ವಹಿಸಿಕೊಂಡಿದೆ.

