ಕೊಚ್ಚಿ: ಅತೀವ ಗಂಭೀರಾವಸ್ಥೆಯಲ್ಲಿ ಹೃದ್ರೋಗಿಯಾಗಿ ತಮಿಳುನಾಡಿನ ನಾಗರಕೊವಿಲ್ ಆಸ್ಪತ್ರೆಯಲ್ಲಿ ಜನಿಸಿದ ಒಂದು ದಿನ ಪ್ರಾಯದ ಎಳೆ ಕೂಸಿಗೆ ಕೇರಳ ಮುಖ್ಯ ಮಂತ್ರಿಯವರ ಕಚೇರಿಯಿಂದ ನೇರವಾಗಿ ಅನುಮತಿ ಲಭಿಸಿದ ಹಿನ್ನೆಲೆಯಲ್ಲಿ ವೈದ್ಯರು ತುರ್ತು ಚಿಕಿತ್ಸೆಯನ್ನು ನೀಡಿ ಮಾನವೀಯತೆ ಮೆರೆದ ಘಟನೆ ನಡೆದಿದೆ. ಲಾಕ್‍ಡೌನ್ ನ ಹಿನ್ನೆಲೆಯಲ್ಲಿ ಗಡಿಗಳು ಬಂದಾಗಿರುವಾಗಲೂ ಮಾನವೀಯ ದೃಷ್ಟಿಯಿಂದ ಚಿಕಿತ್ಸೆಗೆ ಅನುಮತಿ ನೀಡಿದ ಪಿಣರಾಯಿ ವಿಜಯನ್ ರವರಿಗೆ ವ್ಯಾಪಕವಾದ ಪ್ರಶಂಸೆಗಳು ಹರಿದು ಬರುತ್ತಿವೆ.
ಜನಿಸಿ ಕೇವಲ ಒಂದು ದಿನ ಮಾತ್ರ ಪ್ರಾಯವಿರುವ ಕೂಸನ್ನು ಕೇರಳದ ಕೊಚ್ಚಿಯಲ್ಲಿರುವ ಆಸ್ಪತ್ರೆಗೆ ತಲುಪಿಸಲಾಗಿದೆ. ಮಂಗಳವಾರ ಬೆಳಿಗ್ಗೆ ಜನಿಸಿದ ಮಗುವನ್ನು ಮಂಗಳವಾರ ರಾತ್ರಿ 10.30 ರ ಅಂದಾಜಿಗೆ ಆಸ್ಪತ್ರೆಗೆ ತಲುಪಿಸಲಾಗಿದೆ. ಎರ್ನಾಕುಳಂ ಲಿಸಿ ಆಸ್ಪತ್ರೆಯ ಉನ್ನತ ವೈದ್ಯರು ಬುಧವಾರ ಬೆಳಿಗ್ಗೆ ಶಸ್ತ್ರಕ್ರಿಯೆ ನಡೆಸಿದರು.
ಪ್ರತ್ಯೇಕ ಸಂದರ್ಭದಲ್ಲಿ ನಾಗರ್‍ಕೋವಿಲ್ ಆಸ್ಪತ್ರೆಯ ಅಧಿಕೃತರು ಕೊಚ್ಚಿಯಲ್ಲಿರುವ ಲಿಸಿ ಆಸ್ಪತ್ರೆಗೆ ಶಿಫಾರಸ್ಸು ಮಾಡಿದ್ದರು. ಮುಂದುವರಿದ ಭಾಗವಾಗಿ ಲಿಸಿ ಆಸ್ಪತ್ರೆಯ ವೈದ್ಯರುಗಳು ಮುಖ್ಯ ಮಂತ್ರಿಯ ಕಚೇರಿಗೆ ಮಾಹಿತಿ ನೀಡಿದಾಗ ಕೂಡಲೇ ಅನುಮತಿ ಲಭಿಸಿದೆ. ಮಂಗಳವಾರ ಅಪರಾಹ್ನ 2 ರ ಸುಮಾರಿಗೆ ಮಗುವನ್ನು ಕರೆದುಕೊಂಡ ಅಂಬ್ಯುಲೆನ್ಸ್ ರಾತ್ರಿ 9.30ರ ಸುಮಾರಿಗೆ ಕೊಚ್ಚಿಗೆ ತಲಪಿತ್ತು.

