ಪೆರ್ಲ: ರಾಜ್ಯ ಸರ್ಕಾರದ ಸಹಕಾರದೊಂದಿಗೆ ಎಣ್ಮಕಜೆ ಗ್ರಾಮ ಪಂಚಾಯತಿ ಹಾಗೂ ಸಿ ಡಿ ಎಸ್ ನೇತೃತ್ವದಲ್ಲಿ ಪೆರ್ಲ ಅಂಗನವಾಡಿ ಯಲ್ಲಿ ಕಾರ್ಯಾಚರಿಸುವ ಸಮುದಾಯ ಅಡುಗೆ ಮನೆ(ಕಮ್ಯೂನಿಟಿ ಕಿಚನ್) ಗೆ ಮಂಜೇಶ್ವರ ಶಾಸಕ ಎಂ.ಸಿ. ಖಮರುದ್ದೀನ್ ಹಾಗೂ ಕಾಸರಗೋಡು ಶಾಸಕ ಎನ್. ಎ.ನೆಲ್ಲಿಕುನ್ನು ಅವರು ಭೇಟಿ ನೀಡಿ ಕಮ್ಯೂನಿಟಿ ಕಿಚನ್ ವ್ಯವಸ್ಥೆಯನ್ನು ಅವಲೋಕನ ನಡೆಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಗ್ರಾ.ಪಂ. ಗುರುತಿಸಿರುವ ಅಶ್ರಯ ವಿಭಾಗದವರಿಗೆ, ರೋಗಿಗಳಿಗೆ, ಅನ್ಯರಾಜ್ಯ ಕಾರ್ಮಿಕರಿಗೆ ಸಮುದಾಯ ಅಡುಗೆ ಮನೆಯ ಮೂಲಕ ಉಚಿತ ಊಟ ವಿತರಿಸುತ್ತಿದ್ದು, ಜನಸಾಮಾನ್ಯರು ಹೆಚ್ಚಿನ ಸಂಖ್ಯೆಯಲ್ಲಿ ಈ ಕೇಂದ್ರವನ್ನು ಆಶ್ರಯಿಸುತ್ತಿದ್ದಾರೆ. ಗ್ರಾ.ಪಂ. ಹಾಗೂ ಊರ ದಾನಿಗಳ ಸಹಾಯದಿಂದ ಸಮುದಾಯ ಅಡುಗೆ ಮನೆ ಯೋಜನೆ ಯಶಸ್ವಿಯಾಗಿ ಕಾರ್ಯಾಚರಿಸುವುದು ಲಾಕ್ ಡೌನ್ ಸಂದರ್ಭದಲ್ಲಿ ನಿರ್ಗತಿಕರಿಗೆ ವರದಾನವಾಗಿದೆ.
ಭೇಟಿಯ ವೇಳೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಶಾರದಾ ವೈ, ಉಪಾಧ್ಯಕ್ಷ ಅಬೂಬಕ್ಕರ್ ಸಿದ್ದೀಕ್ ಹಾಜಿ ಖಂಡಿಗೆ, ಗ್ರಾ.ಪಂ. ಸದಸ್ಯರಾದ ಸಿದ್ದೀಕ್ ವಳಮೊಗರು, ಅಯಿಶಾ ಎ.ಎ, ವೈದ್ಯಾಧಿಕಾರಿ ಡಾ. ದೀಪಾರಾಜನ್ ಮೊದಲಾದವರು ಉಪಸ್ಥಿತರಿದ್ದರು.


