ಪೆರ್ಲ: ಕೋವಿಡ್ ಕೊರೊನಾ ವೈರಸ್ ಕಾರಣ ಸರ್ಕಾರಿ ಆಸ್ಪತ್ರೆಗಳು ಕೋವಿಡ್ ಚಿಕಿತ್ಸೆಗಾಗಿ ಮೀಸಲುಗೊಂಡಿರುವಂತೆ ಜನಸಾಮಾನ್ಯರು ಖಾಸಗೀ ಆಸ್ಪತ್ರೆಗಳನ್ನು ಆಶ್ರಯಿಸುವ ಅನಿವಾರ್ಯತೆ ಒದಗಿದ್ದು, ಇದನ್ನು ಬಳಸಿ ಖಾಸಗೀ ಆಸ್ಪತ್ರೆಗಳು ಸುಲಿಗೆ ನಡೆಸುತ್ತಿರುವುದಾಗಿ ದೂರಲಾಗಿದೆ.
ಪೆರ್ಲ ಪರಿಸರದ ವ್ಯಕ್ತಿಯೊಬ್ಬರು ಎರಡು ದಿನಗಳ ಹಿಂದೆ ತುರ್ತು ಚಿಕಿತ್ಸೆಗಾಗಿ ಕಾಸರಗೋಡು ಸರ್ಕಾರಿ ಆಸ್ಪತ್ರೆಗೆ ತೆರಳಿದ್ದು ಈ ಸಂದರ್ಭ ಸರ್ಕಾರಿ ಆಸ್ಪತ್ರೆ ಕೋವಿಡ್ ಆಸ್ಪತ್ರೆಯಾಗಿ ಘೋಶಿಸಿರುವ ಹಿನ್ನೆಲೆಯಲ್ಲಿ ಖಾಸಗೀ ಆಸ್ಪತ್ರೆಗೆ ತೆರಳುವಂತೆ ಸೂಚಿಸಲಾಗಿತ್ತು. ಜೊತೆಗೆ ಸರ್ಕಾರಿ ಆಸ್ಪತ್ರೆಯಿಂದ ಅನುಮತಿ ನೀಡಿ ಪತ್ರವನ್ನೂ ನೀಡಲಾಗಿತ್ತು.
ಖಾಸಗೀ ಆಸ್ಪತ್ರೆಯಲ್ಲಿ ಒಂದು ದಿನ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ತೆರಳುವಾಗ ಅತ್ಯಧಿಕ ಬಿಲ್ ಪಾವತಿಸುವಂತೆ ಸೂಚಿಸಲಾಯಿತು. ಇದರಿಂದ ಕಡು ಬಡತನದಲ್ಲಿದ್ದ ಕುಟುಂಬ ದಿಕ್ಕೆಟ್ಟು ಸರ್ಕಾರಿ ಆಸ್ಪತ್ರೆಯಿಂದ ಕಳಿಸಿರುವ ಬಗ್ಗೆ ಹಲವು ಬಾರಿ ವಿನಂತಿಸಿ, ಬಿಲ್ ಪಾವತಿಯ ಮೊತ್ತವನ್ನು ಕಡಿತಗೊಳಿಸುವಂತೆ ವಿನಂತಿಸಿದರೂ ಒಡಂಬಡದ ಆಸ್ಪತ್ರೆ ಅಧಿಕೃತರು ದರ್ಪದಿಂದ ಮಾತನಾಡಿದರೆಂದು ರೋಗಿಯ ಮನೆಯವರು ತಿಳಿಸಿದ್ದಾರೆ. ಬಳಿಕ ಪ್ರಭಾವಿ ರಾಜಕೀಯ ಪಕ್ಷವೊಂದರ ಜಿಲ್ಲಾಧ್ಯಕ್ಷರ ಮಾತಿನ ಮೇರೆಗೆ ಆಸ್ಪತ್ರೆ ಅಧಿಕೃತರು ಬಿಲ್ ಮೊತ್ತದಲ್ಲಿ ಶೇ.40 ಕಡಿತಗೊಳಿಸಿ ರೋಗಿಗೆ ತೆರಳಲು ಅನುಮತಿಸಿದರೆಂದು ತಿಳಿದುಬಂದಿದೆ.
ಈ ಬಗ್ಗೆ ಜಿಲ್ಲಾಡಳಿತ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.


