ಕಾಸರಗೋಡು: ಜಿಲ್ಲೆಯ ಗಡಿಪ್ರದೇಶಗಳಲ್ಲಿ ಸಹಕಾರಿ ಸಂಘಗಳ ಕನ್ಸ್ಯೂಮರ್ ಸ್ಟೋರ್ ಗಳು ಆರಂಭಗೊಂಡಿದ್ದು, ಈ ನಿಟ್ಟಿನಲ್ಲಿ ಆಹಾರ ಸಾಮಾಗ್ರಿಗಳ ರವಾನೆ ಶನಿವಾರ ಆರಂಭಗೊಂಡಿದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಆದೇಶ ಪ್ರಕಾರ ತ್ವರಿತಗತಿಯಲ್ಲಿ ಈ ಸಂಬಂಧ ಕ್ರಮ ಕೈಗೊಳ್ಳಲಾಗಿದೆ. ಮೊದಲ ಹಂತವಾಗಿ ಧವಸಧಾನ್ಯಗಳ ಅಂಗಡಿಗಳು ಆರಂಭಗೊಂಡಿದ್ದು, ಎರಡನೇ ಹಂತದಲ್ಲಿ ಔಷಧದ ಅಂಗಡಿಗಳು ಆರಂಭಗೊಳ್ಳಲಿವೆ. ಮೊದಲ ಹಂತದ ಅಂಗವಾಗಿ ಕನ್ಸ್ಯೂಮರ್ ಫೆಡ್ ಅಗತ್ಯ ಧಾನ್ಯಗಳನ್ನು ಈ ಪ್ರದೇಶಗಳಿಗೆ ರವಾನಿಸಿದೆ. ಕನ್ಸ್ಯೂಮರ್ ಫೆಡ್‍ನ ದಾಸ್ತಾನು ಗೃಹಗಳಿಂದ ಆಹಾರಪದಾರ್ಥ ಪೂರೈಸಲಾಗುತ್ತಿದೆ.
ಈ ಸಂಬಂಧ ಲಾರಿಗಳಲ್ಲಿ ರವಾನೆ ಮಾಡುವ ಪ್ರಕ್ರಿಯೆಗೆ ಕನ್ಸ್ಯೂಮರ್ ಫೆಡ್ ನಿರ್ದೇಶ ವಿ.ಕೆ.ರಾಜನ್ ಹಸಿರು ನಿಶಾನಿ ತೋರಿದರು. ವಲಯ ಸಹಾಯಕ ಪ್ರಬಂಧಕ ಪಿ.ವಿ.ಶೈಲೇಷ್ ಬಾಬು, ಸಹಕಾರಿ ಸಹಾಯಕ ರೆಜಿಸ್ತ್ರಾರ್ ಜಯಚಂದ್ರನ್, ರಾಜಗೋಪಾಲ್ ಅವರ ನೇತೃತ್ವದಲ್ಲಿ ಧಾನ್ಯಗಳ ರವಾನೆ ನಡೆದಿದೆ. ದಿನಸಿ ಅಂಗಡಿ ಮತ್ತು ಔಷಧದ ಅಂಗಡಿಗಳೂ ಈ ನಿಟ್ಟಿನಲ್ಲಿ ಕಾರ್ಯಾರಂಭಗೊಳ್ಳಲಿವೆ. ಮೊದಲ ಹಂತದಲ್ಲಿ ಅಅಗತ್ಯ ಸಾಮಾಗ್ರಿಗಳು ಇಲ್ಲಿ ದೊರೆಯಲಿವೆ. ಗಡಿ ದಾಟದೇ ಜನತೆಗೆ ಸಾಮಾಗ್ರಿ, ಔಷಧ ಈ ಮೂಲಕ ಲಭಿಸಲಿದೆ. ಗಡಿಪ್ರದೇಶದ ಒಟ್ಟು 10 ಕೇಂದ್ರಗಳಲ್ಲಿ ಈ ಸಹಕಾರಿ ಅಂಗಡಿಗಳು ಆರಂಭಗೊಳ್ಳಲಿವೆ.


