ನವದೆಹಲಿ: ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಭಾರತವಷ್ಟೇ ಅಲ್ಲದೇ ವಿಶ್ವದ ದೊಡ್ಡ ದೊಡ್ಡ ರಾಷ್ಟ್ರಗಳಲ್ಲೇ ಲಾಕ್ ಡೌನ್ ನಿಯಮವನ್ನು ಅನುಸರಿಸಲಾಗುತ್ತಿದೆ. ನಿತ್ಯ ಜನರು ಭಯದಲ್ಲೇ ಜೀವನ ಸಾಗಿಸುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ. ಮಾರಕ ಸೋಂಕಿನ ಲಕ್ಷಣ ಹಾಗೂ ಕೊರೊನಾ ತಡೆಗಟ್ಟಲು ಏನೆಲ್ಲ ಮಾಡಬಹುದು ಎಂಬುದರ ಬಗ್ಗೆ ವಿಜ್ಞಾನಿಗಳು ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಸೇರಿದಂತೆ ವೈದ್ಯಕೀಯ ತಂಡಗಳು ಹಗಲು-ರಾತ್ರಿ ಸಂಶೋಧನೆಗಳನ್ನು ನಡೆಸುತ್ತಿದ್ದಾರೆ.
ಕೊರೊನಾ ವೈರಸ್ ಸೋಂಕು ಹರಡುವುದರ ಬಗ್ಗೆ ಅಧ್ಯಯನಗಳ ವರದಿಗಳು ಸಿದ್ಧವಾಗಿದ್ದು, ಲಾಕ್ ಡೌನ್ ನಿರ್ಧಾರವನ್ನು ಎಷ್ಟು ಹಂತಗಳಲ್ಲಿ ತೆರವುಗೊಳಿಸಬೇಕು ಎಂಬುದರ ಕುರಿತು ಸರ್ಕಾರವು ತೀರ್ಮಾನ ತೆಗೆದುಕೊಳ್ಳಲು ಸಹಾಯವಾಗಿದೆ.
ಒಬ್ಬ ಕೊರೊನಾ ವೈರಸ್ ಸೋಂಕಿತನಿಂದ 30 ದಿನಗಳಲ್ಲಿ ಕನಿಷ್ಠ 406 ಮಂದಿಗೆ ಸೋಂಕು ಹರಡಲು ಸಾಧ್ಯ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಈಗಾಗಲೇ ಸ್ಪಷ್ಟಪಡಿಸಿದೆ. ಇದೀಗ ಕೊರೊನಾ ವೈರಸ್ ಒಂದು ನಿರ್ದಿಷ್ಟ ಪ್ರದೇಶದಲ್ಲಿ ಒಬ್ಬ ಸೋಂಕಿತನಿಂದ ಅದೆಷ್ಟು ವೇಗವಾಗಿ ಜನರಿಂದ ಜನರಿಗೆ ಹರಡುತ್ತದೆ ಎಂಬುದನ್ನು (ಆರ್ ಒ) ಅಧ್ಯಯನವು ತಿಳಿಸುತ್ತದೆ.
ಉದಾಹರಣೆಗೆ ಹೇಳುವುದಾದರೆ ಯಾವುದೇ ಸಾಂಕ್ರಾಮಿಕ ರೋಗವಾಗಿದ್ದರೂ ಆರಂಭಿಕ ಹಂತದಲ್ಲಿ ಎರಡು ದಿನಗಳಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆಯು ನಾಲ್ಕಕ್ಕೆ ಏರಿಕೆಯಾದರೆ ಅದು ನಾಲ್ಕು ದಿನಗಳಲ್ಲಿ 16ಕ್ಕೆ ಏರಿಕೆಯಾಗುತ್ತದೆ. ಆರ್ ಒ ಪ್ರಮಾಣವೇ ಹೆಚ್ಚಾದರೆ ಸೋಂಕಿತರ ಸಂಖ್ಯೆಯು ಹೆಚ್ಚಾಗುತ್ತಾ ಹೋಗುತ್ತದೆ. ಆರ್ ಒ ಪ್ರಮಾಣ 1ನೇ ಹಂತದಲ್ಲಿದ್ದರೆ ಸೋಂಕು ಹರಡುವಿಕೆ ನಿರಂತರವಾಗಿ ಇರುವ ಸಾಧ್ಯತೆಗಳು ಇರುತ್ತವೆ ಎಂದು ಅಧ್ಯಯನ ತಿಳಿಸುತ್ತದೆ.


