ಪೆರ್ಲ: ಕೊರೊನಾ ಮಹಾಮಾರಿಯ ಕಾರಣ ರಾಷ್ಟ್ರ ಸಂಪೂರ್ಣ ಲಾಕ್ ಡೌನ್ ನಿಂದ ಮೌನವಾಗಿದ್ದರೆ ಹಲವಡೆ ಹೊಸ ಪ್ರಯತ್ನಗಳ ಮೂಲಕ ನೋವಲ್ಲೂ ಸಾಫಲ್ಯತೆಯನ್ನು ಕಂಡುಕೊಳ್ಳಲು ಹಲವರು ಯತ್ನಿಸಿ ಮಾದರಿಯಾಗುತ್ತಿರುವುದು ವ್ಯಾಪಕ ಪ್ರಶಂಸನೆಗೂ ಪಾತ್ರವಾಗುತ್ತಿದೆ.
ಲಾಕ್ ಡೌನ್ ಕಾರಣ ಇಂದೀಗ ಮನೆಗಳಲ್ಲೇ ಬಂದಿಯಾಗಿರುವ ಜನರು ಹೊಸ ಆಲೋಚನೆಗಳ ಮೂಲಕ ಅಲ್ಲಲ್ಲಿ ಕ್ರಿಯಾತ್ಮಕ ಚಟುವಟಿಕೆಗಳನ್ನು ರೂಪಿಸುತ್ತಿದ್ದು, ಇಲ್ಲೊಬ್ಬರು ಒಂದು ಹೆಜ್ಜೆ ಮುಂದೆ ಯೋಚಿಸಿ ಬದುಕಿನ ಹಲವು ವರ್ಷಗಳ ಸಂಕೀರ್ಣತೆಗೊಂದು ಕೊನೆ ಹಾಡಿದ್ದಾರೆ.
ಶೇಣಿ ಸಮೀಪದ ಏಳ್ಕಾನದ ಕೊಡಿಪ್ಪಾಡಿ ಐತ್ತಪ್ಪ ನಾಯ್ಕ ಎಂಬವರು ಸ್ವತಃ ಕುಟುಂಬ ಸದಸ್ಯರನ್ನು ಜೊತೆಯಾಗಿಸಿ ಬಾವಿಯೊಂದನ್ನು ನಿರ್ಮಿಸಿ ಹಲವು ದಶಕಗಳ ನೀರಿನ ಸಮಸ್ಯೆಗೆ ಉತ್ತರ ಕಂಡುಕೊಂಡ ಖುಷಿಯಲ್ಲಿ ಇದೀಗ ಎಲ್ಲರ ಗಮನ ಸೆಳೆಯುತ್ತಿರುವ ಭಗೀರಥ.
ಐತ್ತಪ್ಪ ನಾಯ್ಕ ಅವರಿಗೆ ಇದೀಗ 70 ರ ಹರೆಯ.ಕೂಲಿ ಕೆಲಸ ನಿರ್ವಹಿಸುತ್ತಿದ್ದ ಇವರು ಅನಾರೋಗ್ಯ ಕಾರಣ ಇದೀಗ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ. ಪುಟ್ಟ ಕುಟುಂಬಕ್ಕೆ ಒಂದೂವರೆ ಎಕ್ರೆಗಳಷ್ಟು ಸ್ಥಳವಿದ್ದರೂ ಸ್ವಂತ ನೀರಿನಾಶ್ರಯವಿರಲಿಲ್ಲ. ಪಕ್ಕದ ಖಾಸಗೀ ವ್ಯಕ್ತಿಗಳ ಬಾವಿಯನ್ನು ಆಶ್ರಯಿಸಿದ್ದರು.
ಕೊರೊನಾ ಕಾರಣ ಲೋಕ್ ಡೌನ್ ಹೇರಲ್ಪಡುತ್ತಿರುವಂತೆ ತಮ್ಮ ಸ್ವಂತ ಜಮೀನಿನಲ್ಲಿ ಬಾವಿಯೊಂದನ್ನು ಕೊರೆಯುವ ಆಲೋಚನೆ ಇವರಿಗೆ ಹೊಳೆಯಿತು. ಐತ್ತಪ್ಪ ನಾಯ್ಕ, ಅವರ ಪತ್ನಿ ಸರಸ್ವತಿ ಹಾಗೂ ಪುತ್ರಿ ಸೌಮ್ಯ ಕುಮಾರಿಯ ಸಹಕಾರದೊಂದಿಗೆ ನಿರಂತರ 20 ದಿನಗಳ ಫಲವಾಗಿ ಸುಮಾರು ಏಳು ಪೀಟ್ ಆಳದಲ್ಲಿ(ಐದು ಕೋಲು) ಇದೀಗ ನೀರಿನ ಲಭ್ಯತೆ ಸಾಫಲ್ಯಗೊಂಖಡಿರುವುದರಿಂದ ಸಂತಸ ಕುಟುಂಬದಲ್ಲಿ ಮನೆಮಾಡಿದೆ.
ಐತ್ತಪ್ಪ ನಾಯ್ಕ ಅವರ ಪತ್ನಿ ಸರಸ್ವತಿಯವರು ಉದ್ಯೋಗ ಖಾತರಿ ಕಾರ್ಮಿಕೆಯಾಗಿದ್ದು, ಮಾಸಿಕ ಐದು-ಆರು ದಿನಗಳ ಸಂಬಳವಷ್ಟೇ ಲಭಿಸುತ್ತಿದೆ. ಉಳಿದ ದಿನಗಳಲ್ಲಿ ಆಗುವಷ್ಟು ಇತರೆಡೆಗಳಲ್ಲಿ ಕೂಲಿ-ನಾಲಿ ಮಾಡಿ ಬದುಕನ್ನು ಮುನ್ನಡೆಸುತ್ತಿದ್ದಾರೆ. ಏಕ ಪುತ್ರಿ ಸೌಮ್ಯಕುಮಾರಿ ಹತ್ತನೇ ತರಗತಿ ತನಕ ವಿದ್ಯಾಭ್ಯಾಸಗೈದಿದ್ದು, ತಂದೆಯವರ ಅನಾರೋಗ್ಯ ಕಾರಣ ಮನೆಯಲ್ಲೇ ಉಳಿಯಬೇಕಾದ ಅನಿವಾರ್ಯತೆಗೊಳಗಾಗಿರುವರು. ಸಂಕಷ್ಟದಲ್ಲಿರುವ ಕುಟುಂಬಕ್ಕೆ ಇದೀಗ ಜೀವಜಲದ ಕೃಪೆಯೊದಗಿಸಿರುವುದು ಭರವಸೆಗೆ ಕಾರಣವಾದ ಸಂತಸದಲ್ಲಿ ಈ ಪುಟ್ಟ ಕುಟುಂಬ ಸಾರ್ಥಕತೆ ಕಾಣುತ್ತಿದೆ.



