ಬದಿಯಡ್ಕ: ಬದಿಯಡ್ಕದ ಪಳ್ಳತ್ತಡ್ಕ ಸಮೀಪದ ಬೈಕುಂಜೆ ನಿವಾಸಿ ಕೃಷಿಕರೋರ್ವರು ಬೃಹತ್ ಸಂಖ್ಯೆಯಲ್ಲಿ ಬೆಳೆಸಿದ ಕುಂಬಳಕಾಯಿ ಬೆಳೆ ಲಾಕ್ ಡೌನ್ ಕಾರಣ ಮಾರಾಟಗೈಯಲಾಗದೆ ಸಂಕಷ್ಟದಲ್ಲಿರುವ ಮಾಹಿತಿ ತಿಳಿದ ರಾಜ್ಯ ಕೃಷಿ ಸಚಿವರೇ ಸ್ವತಃ ಪೋನ್ ಮೂಲಕ ಸಂಪರ್ಕಿಸಿ ಮಾರಾಟ ವ್ಯವಸ್ಥೆ ಕಲ್ಪಿಸಿದ ವಿದ್ಯಮಾನ ಸರ್ವತ್ರ ಶ್ಲಾಘನೆಗೊಳಗಾಗುವ ಜೊತೆಗೆ ಕೃಷಿಕರ ಮನೋಸ್ಥೈರ್ಯಕ್ಕೆ ಕಾರಣವಾಗಿದೆ.
ಬೈಕುಂಜ ಶಂಕರ ನಾರಾಯಣ ಭಟ್ ಓರ್ವ ಪ್ರಗತಿಪರ ಕೃಷಿಕರು. ಅಡಿಕೆ, ತೆಂಗು, ಬಾಳೆ, ಕರಿಮೆಣಸು,ಭತ್ತ ಹಾಗೂ ರಬ್ಬರ್ ಕೃಷಿಯನ್ನು ಆಸಕ್ತಿಯಿಂದ ನಿರ್ವಹಿಸುತ್ತಾರೆ. ಪ್ರಸಕ್ತ ವರ್ಷ ಒಂದು ಬೆಳೆ ಭತ್ತ ಬೆಳೆದ ನಂತರ ಗದ್ದೆಯಲ್ಲಿ ಕುಂಬಳ ಕೃಷಿ ಮಾಡಿದ್ದಾರೆ. ಸುಮಾರು ಒಂದು ಎಕ್ರೆ ಗದ್ದೆಯಲ್ಲಿ ನಾಂದಾರಿ ತಳಿಯ ಕುಂಬಳ ಕೃಷಿ ಮಾಡಿದ್ದು, ನಿರೀಕ್ಷೆಗೂ ಮೀರಿ 14 ರಿಂದ 15 ಟನ್ ಗಳಷ್ಟು ಕುಂಬಳಕಾಯಿ ಫಸಲು ಲಭ್ಯವಾಗಿದೆ. ಸಾವಯವ ಪದ್ದತಿಯಲ್ಲಿ ಬೆಳೆಸಲಾದ ಒಂದೊಂದು ಕುಂಬಳಕಾಯಿಗಳೂ 4 ರಿಂದ ಆರು ಕಿಲೋಗಳಷ್ಟು ಹುಲುಸಾಗಿ ಬೆಳೆದು ನಿಂತಿದ್ದು, ಕೊಯ್ಲು ಇತ್ತೀಚೆಗಷ್ಟೆ ನಿರ್ವಹಿಸಲಾಗಿದೆ.
ಕೊಯ್ಲಿನ ಬಳಿಕ ವಕ್ರಿಸಿದ ಲಾಕ್ ಡೌನ್:
ಆದರೆ ಕೊಯ್ಲು ಮುಗಿಸುತ್ತಿರುವಂತೆ ಕೋವಿಡ್ ಕೊರೊನಾ ವೈರಸ್ ಕಾರಣ ರಾಷ್ಟ್ರ ವ್ಯಾಪಿ ಲಾಕ್‍ಡೌನ್ ಹೇರಲ್ಪಟ್ಟ ಕಾರಣ ಬೆಳೆ ಪೂರ್ತಿ ಮನೆಯಲ್ಲೇ ಬಾಕಿಯಾಗುವಂತಾಯಿತು. ಇದರಿಂದ ದಿಕ್ಕೆಟ್ಟಿದ್ದ ಭಟ್ ಅವರು ತಮ್ಮ ಸಂಕಷ್ಟವನ್ನು ಜಾಲತಾಣಗಳ ಮೂಲಕ ತೋಡಿಕೊಂಡಿದ್ದರು. ಈ ಬಗ್ಗೆ ಜಾಲತಾಣಗಳಿಂದ ವಿಷಯ ಸಂಗ್ರಹಿಸಿದ ಖ್ಯಾತ ಜಲತಜ್ಞ ಶ್ರೀಪಡ್ರೆ ಭಟ್ ಅವರ ಕೃಷಿ ತಪಸ್ಸನ್ನು ಶ್ಲಾಘಿಸಿ ಬಳಿಕ ರಾಜ್ಯ ಕೃಷಿ ಸಚಿವ ನ್ಯಾಯವಾದಿ ವಿ.ಎಸ್.ಸುನಿಲ್ ಕುಮಾರ್ ಅವರ ಗಮನಕ್ಕೆ ತಂದಿದ್ದರು. ಈ ನಿಟ್ಟಿನಲ್ಲಿ ಕೂಡಲೇ ಸ್ಪಂದಿಸಿದ ಕೃಷಿ ಸಚಿವರು ಗುರುವಾರ ಶಂಕರನಾರಾಯಣ ಭಟ್ ಅವರನ್ನು ಪೋನ್ ಮೂಲಕ ಸಂಪರ್ಕಿಸಿ ಭಟ್ ಅವರ ಕೃಷಿ ವ್ಯವಸ್ಥೆಗಳ ವಿವರಗಳನ್ನು ಸಂಗ್ರಹಿಸಿ, ಮುಕ್ತ ಶ್ಲಾಘನೆ ವ್ಯಕ್ತಪಡಿಸಿ ರಾಜ್ಯ ಹಾರ್ಟಿಕಲ್ಚರ್ ಮಿಷನ್ ಮೂಲಕ ಎಲ್ಲಾ ಕುಂಬಳಕಾಯಿಗಳನ್ನೂ ಖರೀದಿಸುವ ಭರವಸೆ ನೀಡಿರುವರು.
ಪ್ರತಿ ಕಿಲೋ ಕುಂಬಳಕಾಯಿಗಳನ್ನು 17 ರೂ.ಗಳಿಗೆ ಖರೀದಿಸುವ ಬಗ್ಗೆ ಭರವಸೆ ನೀಡಿರುವ ಸಚಿವರು, ಕೃಷಿ ಚಟುವಟಿಕೆಗಳನ್ನು ಇನ್ನಷ್ಟು ವಿಸ್ತರಿಸುವ ಬಗ್ಗೆ ಮನವಿ ಮಾಡಿರುವರೆಂದು ಭಟ್ ವಿಜಯವಾಣಿಗೆ ತಿಳಿಸಿದರು.
ಕೊರೊನಾ ಲಾಕ್ ಡೌನ್ ಕಾರಣ ಮಾರುಕಟ್ಟೆ ಸ್ಥಗಿತವಾಗಿದ್ದರೂ ಒಳ್ಳೆಯ ಬೆಳೆ ಮತ್ತು ಬೆಲೆಯೂ ಸಿಕ್ಕಿದೆ ಎಂದು ಹೆಮ್ಮೆಯಿಂದ ಹೇಳುತ್ತಾರೆ. ಅವರ ಕೊಟ್ಟಿಗೆಯಲ್ಲಿ ಪೇರಿಸಿಟ್ಟ ಕುಂಬಳ ಕಾಯಿ ನೋಡಲು ಕಣ್ಣಿಗೆ ಹಬ್ಬ. ಕೃಷಿಯಲ್ಲಿ ಸಮೃದ್ಧ ಜೀವನ ಕಾಣುತ್ತಿರುವ 60ರ ಹರೆಯದ ಭಟ್ ಅವರಿಗೆ ಹೆಗಲಾದವರು ಪತ್ನಿ ವಿಜಯಲಕ್ಷ್ಮೀ ಹಾಗೂ ಅನಿಮೇಶನ್ ವಿಜ್ಞಾನದಲ್ಲಿ ಪದವಿ ಪಡೆದರೂ ಕಂಪೆನಿ ಉದ್ಯೋಗವನ್ನು ಅರಸದೆ ತಂದೆಯೊಂದಿಗೆ ಕೃಷಿಯಲ್ಲಿ ತೊಡಗಿಕೊಂಡಿರುವ ಯುವ ಉತ್ಸಾಹಿ ಪುತ್ರ ಚಿನ್ಮಯಕೃಷ್ಣ ಒಟ್ಟು ಸಮಾಜಕ್ಕೆ ಆದರ್ಶರಾಗಿದ್ದಾರೆ. ಕೃಷಿಯಲ್ಲಿ ಸಾಧನೆ ಮುಖ್ಯ ಎಂದು ಯುವ ಕೃಷಿಕರಿಗೆ ಕಿವಿಮಾತು ಹೇಳುತ್ತಾರೆ. ಪರೋಪಕಾರಿಯಾಗಿರುವ ಭಟ್ ಸ್ನೇಹಿತರಿಗೆ ತರಕಾರಿ,ಹಣ್ಣು ಕೊಟ್ಟು ಖುಷಿ ಪಡುತ್ತಾರೆ. ಜೇನುಕೃಷಿಯಲ್ಲೂ ಪಳಗಿರುವ ಭಟ್ ಉತ್ತಮ ಗುಣಮಟ್ಟದ ಜೇನನ್ನು ಒದಗಿಸುತ್ತಾರೆ. ಇಂದಿನ ಕೋವಿಡ್ ಬಾಧಿತ ದಿನಗಳಲ್ಲಿ ಬದುಕುವುದು ಹೇಗೆ ಎಂಬುದಕ್ಕೆ ಉದಾಹರಣೆಯಾಗಿ ಕೇವಲ ದುಡ್ಡು ಮಾತ್ರ ಬದುಕು ಅಲ್ಲ,ನಮ್ಮ ಆಹಾರ ನಮ್ಮಲ್ಲಿ ಇದ್ದರೆ ಮಾತ್ರ ಕೃಷಿಕ ನಿಶ್ಚಿಂತ ಎಂಬ ವಿಚಾರಗಳ ಮೂಲಕ ಶಂಕರನಾರಾಯಣ ಭಟ್ ಆದರ್ಶಪ್ರಾಯರಾಗಿದ್ದಾರೆ.



