ಮಂಜೇಶ್ವರ: ಕೋವಿಡ್ 19 ರ ಲಾಕ್ ಡೌನ್ ನಲ್ಲಿ ಹೊರ ರಾಜ್ಯ ಕಾರ್ಮಿಕರ ಸಹಿತ ರಾಜ್ಯದಲ್ಲಿ ಯಾವೊಬ್ಬನೂ ಕೂಡಾ ಹಸಿವಿನಿಂದ ಇರಬಾರದೆಂಬ ಉದ್ದೇಶದಿಂದ ಸರ್ಕಾರದ ನೆರವಿನೊಂದಿಗೆ ಪಂ. ನ ಕುಟುಂಬಶ್ರೀಯ ನೇತೃತ್ವದೊಂದಿಗೆ ಮಧ್ಯಾಹ್ನದ ಊಟವನ್ನು ಹಸಿದಾತನ ಮನೆಗೆ ತಲುಪಿಸುವ ವ್ಯವಸ್ಥೆಯನ್ನು ಕಲ್ಪಿಸಿದ್ದರೂ ಮಂಜೇಶ್ವರ ಗ್ರಾ. ಪಂ. ನ ಕಾರ್ಯದರ್ಶಿಗೆ ಎರಡನೇ ವಾರ್ಡು ತೂಮಿನಾಡಿನಲ್ಲಿರುವ ಸುಮಾರು ಎಪ್ಪತ್ತೈದು ಹೊರ ರಾಜ್ಯ ಕಾರ್ಮಿಕರ ಬಗ್ಗೆ ಯಾರೋ ತಪ್ಪು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಶುಕ್ರವಾರ ಆಹಾರ ನೀಡಲು ನಿರಾಕರಿಸಿರುವ ಬಗ್ಗೆ ಸ್ಥಳೀಯ ಸಾಮಾಜಿಕ ಕಾರ್ಯಕರ್ತರು ಆರೋಪಿಸಿದ್ದಾರೆ.
ಬಳಿಕ ಈ ಬಗ್ಗೆ ಸ್ಥಳೀಯ ಸಾಮಾಜಿಕ ಕಾರ್ಯಕರ್ತರು ಹಸಿವಿನಿಂದ ಅನ್ನಕ್ಕಾಗಿ ಕಾಯುತ್ತಿರುವ ಹೊರ ರಾಜ್ಯ ಕಾರ್ಮಿಕರ ಅಳಲನ್ನು ಕಂಡು ಕಾರ್ಯದರ್ಶಿಯವರನ್ನು ತರಾಟೆಗೆ ತೆಗೆದುಕೊಂಡರು. ಈ ಹಿನ್ನೆಲೆಯಲ್ಲಿ ಹೊರ ರಾಜ್ಯ ಕಾರ್ಮಿಕರು ವಾಸವಾಗಿರುವ ಸ್ಥಳಕ್ಕೆ ಆಗಮಿಸಿದ ಪಂ. ಕಾರ್ಯದರ್ಶಿ ಕಾರ್ಮಿಕರ ಕೊಠಡಿಯೊಳಗೆ ನುಗ್ಗಿ ಅವರ ಸಾಮಾಗ್ರಿಗಳನ್ನು ಚೆಲ್ಲಾಪಿಲ್ಲಿಗೊಳಿಸಿ ನಿಮ್ಮಲ್ಲಿ ಅಕ್ಕಿ ಇದೆಯಾ, ಬೇಳೆ-ಕಾಳುಗಳು ಇವೆಯಾ ಎಂದು ಕೇಳಿ ದರ್ಪದ ಮಾತುಗಳನ್ನಡಿ ಬಳಿಕ ಕೊಠಡಿಯೊಳಗೆ ರಾತ್ರಿಯ ಊಟಕ್ಕಾಗಿ ಸ್ಥಳೀಯ ಕ್ಲಬ್ಬಿನವರು ನೀಡಿದ ಅಕ್ಕಿಯನ್ನು ನೋಡಿ ಇನ್ನು ಮುಂದಕ್ಕೆ ನಿಮಗೆ ಊಟದ ವ್ಯವಸ್ಥೆ ಇಲ್ಲವೆಂದು ಹೇಳಿ ಎಪ್ಪತ್ತೈದು ಮಂದಿಯನ್ನು ಪಟ್ಟಿಯಿಂದ ತೆಗೆದು ಹಾಕಿರುವುದಾಗಿ ಸ್ಥಳೀಯ ಸಾಮಾಜಿಕ ಕಾರ್ಯಕರ್ತರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.
ಈ ಮಧ್ಯೆ ಶುಕ್ರವಾರ ಸಂಜೆ ಐದು ಗಂಟೆಯ ಸುಮಾರಿಗೆ ಇವರಿಗೆ ಸ್ಥಳೀಯರು ಮಧ್ಯಾಹ್ನದೂಟದ ವ್ಯವಸ್ಥೆಯನ್ನು ಕಲ್ಪಿಸಿರುವುದಾಗಿ ತಿಳಿದುಬಂದಿದೆ. ಇದೀಗ ಪಂ. ಕಾರ್ಯದರ್ಶಿಯವರ ದರ್ಪದಿಂದಾಗಿ ಸುಮಾರು ಎಪ್ಪತ್ತೈದು ಕಾರ್ಮಿಕರು ಅನ್ನವಿಲ್ಲದೆ ಹಸಿವಿನಿಂದ ಲಾಕ್ ಡೌನ್ ನ ದಿನಗಳನ್ನು ಕಳೆಯ ಬೇಕಾದ ಪರಿಸ್ಥಿತಿ ಬಂದೊದಗಿರುವುದಾಗಿ ತಿಳಿದು ಬಂದಿದೆ. ಹೊರ ರಾಜ್ಯ ಕಾರ್ಮಿಕರಿಗೆ ನೀಡುತಿದ್ದ ಅನ್ನವನ್ನು ಏಕಾಏಕಿ ರದ್ದುಗೊಳಿಸಿದ ಪಂ. ಕಾರ್ಯದರ್ಶಿಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.


