ತಿರುವನಂತಪುರ: ಸಂಸದರ ಅಭಿವೃದ್ಧಿ ನಿಧಿಯನ್ನು 2 ವರ್ಷಗಳ ಮಟ್ಟಿಗೆ ಮೊಟಕುಗೊಳಿಸಿರುವ ಕೇಂದ್ರ ಸರ್ಕಾರದ ತೀರ್ಮಾನ ಬಗ್ಗೆ ಪುನ:ಪರಿಶೀಲಿಸಬೇಕು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಗ್ರಹಿಸಿದ್ದಾರೆ. ಅವರು ತಿರುವನಂತಪುರಂನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಸಂಸದರ ನಿಧಿ ಎಂಬುದು ಲೋಕಸಭಾ ಕ್ಷೇತ್ರದ ಜನತೆಯ ಅಭಿವೃಧ್ಧಿಗಿರುವ ಹಕ್ಕಾಗಿದೆ. ಹೀಗಾಗಿ ಕೇಂದ್ರ ಸರ್ಕಾರದ ಈ ತೀರ್ಮಾನ ನ್ಯಾಯಯುತವಾದುದಲ್ಲ. ಈ ಹಂತದಲ್ಲಿ ಸಂಸದರ ನಿಧಿಯನ್ನು ಪೂರ್ಣ ರೂಪದಲ್ಲಿ ಕೋವಿಡ್-19 ಸೋಂಕು ಪ್ರತಿರೋಧ ಚಟುವಟಿಕೆಗಳಿಗೆ ಮತ್ತು ಚಿಕಿತ್ಸಾ ಸೌಲಭ್ಯಗಳಿಗೆ ರಾಜ್ಯ ಮಟ್ಟದಲ್ಲಿ ಬಳಸುವಂತೆ ಆದೇಶ ನೀಡಬೇಕಿರುವುದು ಕೇಂದ್ರ ಸರ್ಕಾರದ ಕರ್ತವ್ಯ. 2 ವರ್ಷದ ಮಟ್ಟಿಗೆ ಸಂಸದರ ನಿಧಿ ಮಂಜೂರು ಮೊಟಕುಗೊಳಿಸಿದ ತೀರ್ಮಾನ ಸ್ಥಳೀಯ ಮಟ್ಟದ ಅಭಿವೃದ್ಧಿಗೆ ನೇರವಾಗಿ ತೊಡಕಾಗಲಿದೆ ಎಂದರು. ಇದೇ ವೇಳೆ ಕೋವಿಡ್ 19 ಪ್ರತಿರೋಧ ಚಟುವಟಿಕೆಗಳಿಗೆ ಕೇಂದ್ರ ಸರ್ಕಾರ ಕೇರಳಕ್ಕೆ ನೀಡಿರುವ ಧನಸಹಾಯ ಪರಿಪೂರ್ಣವಾಗಿರದೆ, ಈ ವಿಭಾಗದಲ್ಲಿ ಮಲತಾಯಿ ಧೋರಣೆ ತೋರಲಾಗಿದೆ. ಕೊವಿಡ್ ಪ್ರತಿರೋಧ ಚಟುವಟಿಕೆಗಳಿಗೆ ಕೆಲವು ಸಂಸದರು ನಿಧಿ ಮಂಜೂರು ಮಾಡಲು ಸಿದ್ಧರಾದ ವೇಳೆ ಕೇಂದ್ರ ಸರಕಾರ ಇಂತಹ ತೀರ್ಮಾನ ಕೈಗೊಂಡಿರುವುದು ದೊಡ್ಡ ಸಮಸ್ಯೆಯಾಗಿದೆ ಎಂದರು. ಇನ್ನೊಂದೆಡೆ ಆರ್ಥಿಕ ಸಂಗ್ರಹದ ಅಂಗವಾಗಿ ಪ್ರಧಾನ ಮಂತ್ರಿ, ಕೇಂದ್ರ ಸಚಿವರು, ಸಂಸದರು ಮೊದಲಾದವರ ವೇತನದ ಪ್ರಮಾಣದಲ್ಲಿ ಕಡಿತಗೊಳಿಸಿರುವ ತೀರ್ಮಾನ ಅಭಿನಂದನಾರ್ಹ ಎಂದು ಮುಖ್ಯಮಂತ್ರಿ ಹೇಳಿದರು.


