HEALTH TIPS

ಕೊರೋನಾ ಸೋಂಕಿನ ನಡುವೆಯೂ ಕಾಸರಗೋಡಿಗೆ ಒಂದಷ್ಟು ಸಮಾಧಾನ: ಮೂವರು ಪೂರ್ಣಗುಣಮುಖ


         ಕಾಸರಗೋಡು: ಕೊರೋನಾ ಸೋಂಕಿನ ಕರಾಳ ಹಸ್ತದಲ್ಲಿ ನುಲುಗುತ್ತಿರುವ ಕಾಸರಗೋಡು ಜಿಲ್ಲೆಗೆ ಕೊಂಚ ಸಮಾಧಾನ ಲಭಿಸಿದೆ. ರಾಜ್ಯದಲ್ಲೇ ಅತ್ಯಧಿಕ ಸೋಂಕು ಬಾಧಿತ ಪ್ರದೇಶ ಎಂಬ ಕುಖ್ಯಾತಿಗೆ ಒಳಗಾಗಿರುವ ಗಡಿನಾಡು ಜಿಲ್ಲೆಯಲ್ಲಿ ಸೋಂಕಿನಿಂದ ಚಿಕಿತ್ಸೆ ಪಡೆಯುತ್ತಿದ್ದ ಮೂವರು ಈಗ ಗುಣಮುಖರಾಗಿದ್ದಾರೆ ಎಂಬುದು ಈ ಸಮಾಧಾದ ನಿಟ್ಟುಸಿರಿಗೆ ಕಾರಣವಾಗಿದೆ.
         ಕೊರೋನಾ ತಂದ ದುಷ್ಪರಿಣಾಮದ ಭೀಕರತೆಯ ನಡುವೆ ಈ ಸಕರಾತ್ಮಕ ಬೆಳವಣಿಗೆ ತಂದ ಸಂತಸ ಎಷ್ಟಿದೆ ಎಂಬುದನ್ನು ಗಮನಿಸಬೇಕಿದ್ದರೆ ಒಮ್ಮೆ ಕಾಸರಗೋಡು ಜನರಲ್ ಸರಕಾರಿ ಆಸ್ಪತ್ರೆ ಗೆ ತೆರಳಬೇಕು. ಇಲ್ಲಿನ ಪ್ರತಿಯೊಬ್ಬ ಸಿಬ್ಬಂದಿಯ ಮುಖದಲ್ಲಿ ಈಗ ಸಮಾಧಾನದ ಸಂತಸ ಕಂಡುಬರುತ್ತಿದೆ. ರಾಜ್ಯ ಸರಕಾರ ಮತ್ತು ಆರೋಗ್ಯ ಇಲಾಖೆಯ ಸತತ ಯತ್ನದ ಮತ್ತು ಆಸ್ಪತ್ರೆಯ ಸಿಬ್ಬಂದಿಯ ಅಹೋರಾತ್ರೆಯ ದುಡಿಮೆ ಫಲ ನೀಡಿದೆ. ಕಳೆದ ಎರಡು ವಾರಗಳಿಂದ ಕೊರೋನಾ ಪ್ರತಿರೋಧ ರೂಪದಲ್ಲಿ ಇಲ್ಲಿ ನಡೆದು ಬರುತ್ತಿರುವ ಹೋರಾಟದ ಫಲವಿದು.
         56 ವರ್ಷ ಪ್ರಾಯದ, 31 ವರ್ಷದ, 27 ವರ್ಷದ ಮೂವರು ಪುರುಷರು ಈಗ ಪೂರ್ಣ ಗುಣಮುಖರಾದವರು. ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅವರೀಗ ಬಿಡುಗಡೆಗೊಂಡಿದ್ದಾರೆ. ಆಸ್ಪತ್ರೆಯ ಶುಚೀಕರಣ ಸಿಬ್ಬಂದಿಯಿಂದ ತೊಡಗಿ ವೈದ್ಯರ ವರೆಗೆ ಪ್ರತಿಯೊಬ್ಬರೂ ಇಲ್ಲಿ ಏಕಮನಸ್ಸಿನಿಂದ ದುಡಿಯುತ್ತಿದ್ದಾರೆ. ಸ್ಪತ್ರೆಯ ಕನ್ಸಂಟ್ ಗಳಾದ ಡಾ.ಕುಂಞ ರಾಮನ್, ಡಾ.ಕೃಷ್ಣ ನಾಯಕ್, ಡಾ. ಜನಾರ್ದನ ನಾಯಕ್ ನೇತೃತ್ವ ವಹಿಸುವ ಮೆಡಿಕಲ್ ತಂಡ ಚಿಕಿತ್ಸೆಗೆ ಇಲ್ಲಿ ನೇತೃತ್ವ ವಹಿಸುತ್ತಿದೆ.
        ಜಗತ್ತಿನ ಹಲವು ದೇಶಗಳಲ್ಲಿ ತಲೆದೋರಿದ ಕೋವಿಡ್ 19 ತನ್ನ ಎರಡನೇ ಹಂತದ ಪ್ರಭಾವ ತೋರುತ್ತಿರುವ ವೇಳೆ ಮಾರ್ಚ್ ತಿಂಗಳ ಮಧ್ಯ ಭಾಗದಲ್ಲಿ ಕಾಸರಗೋಡು ಜಿಲೆಗೂ ಪ್ರವೇಶ ಮಾಡಿತ್ತು. ಪ್ರತಿದಿನ ರೋಗಬಾಧಿತರ ಸಂಖ್ಯೆ ಹೆಚ್ಚಳಗೊಳ್ಳುತ್ತಿದ್ದರೂ, ಕೋವಿಡ್ 19 ರ ಪ್ರತಿರೋಧ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ನಡೆಸಿದ ಸಮಪರ್ಪಣಾ ಭಾವದ ದುಡಿಮೆ ಫಲ ನೀಡುತ್ತಿದೆ.
         ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ನೇತೃತ್ವದಲ್ಲಿ ಪ್ರತಿರೋಧ ಚಟುವಟಿಕೆಗಳು ನಡೆಯುತ್ತಿವೆ. ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ. ರಾಮದಾಸ್, ಜಿಲ್ಲಾ ಸರ್ವೆಲೆನ್ಸ್ ಅಧಿಕಾರಿ ಡಾ.ಎ.ಟಿ.ಮನೋಜ್, ಕಾಸರಗೋಡು ಜನರಲ್ ಆಸ್ಪತ್ರೆಯ ವರಿಷ್ಠಾಧಿಕಾರಿ ಡಾ.ರಾಜಾರಾಂ ಮೊಲಾವರು ಕೋವಿಡ್ 19 ಪ್ರತಿರೋಧ ಚಟುವಟಿಕೆಗಳಲ್ಲಿ ಮೊದಲ ಸಾಲಿನಲ್ಲಿದ್ದಾರೆ.     
        ಚಿತ್ರ ಮಾಹಿತಿ:1)ಗುಣಮುಖರಾದವರು ಚಿಕಿತ್ಸಾ ಕೇಂದ್ರದಿಂದ ಹೊರಬರುತ್ತಿದ್ದಾಗ ಸಂಭ್ರಮ,2)ಕಾಸರಗೋಡು ಜನರಲ್ ಆಸ್ಪತ್ರೆಯ ಕೋವಿಡ್-19ಚಿಕಿತ್ಸೆಯಲ್ಲಿ ತೊಡಗಿರುವ ವೈದ್ಯರ ತಂಡ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries