ಬದಿಯಡ್ಕ: ಗಡಿನಾಡಿನ ಸಾಮಾಜಿಕ, ಸಾಂಸ್ಕøತಿಕ, ವೈದ್ಯಕೀಯ, ಕೃಷಿ ಸಹಿತ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಕೊಡುಗೆ ನೀಡಿದ ಮನೆತನಗಳಲ್ಲಿ ಒಂದಾಗಿರುವ ಖಂಡಿಗೆ ಮನೆತನದ ಕಲ್ಲಕಟ್ಟದ ಈಶ್ವರ ಭಟ್(87) ಶನಿವಾರ ಮುಂಜಾನೆ ಮಂಗಳೂರಿನ ವಸತಿಯಲ್ಲಿ ನಿಧನರಾದರು.
ಈಶ್ವರ ಭಟ್ ಅವರು ಪ್ರಾಣ ಚೈತನ್ಯ ಚಿಕಿತ್ಸೆ(ಪ್ರಾಣಿಕ್ ಹೀಲಿಂಗ್) ಕ್ಷೇತ್ರದಲ್ಲಿ ವ್ಯಾಪಕ ಅನುಭವಗಳನ್ನು ಹೊಂದಿದ್ದರು. ಕೋಟ್ಟಯಂ ನಲ್ಲಿ ಪ್ರಾಣಿಕ್ ಹೀಲಿಂಗ್ ವಿದ್ಯೆಯ ತರಬೇತಿ ಪಡೆದಿದ್ದ ಇವರು ಮಾನಸಿಕ ಖಿನ್ನತೆ, ಕೌಟುಂಬಿಕ ಕಲಹ, ಮನೋ ವೇದನೆ, ಆಗಾಗ ಕಾಣಿಸಿಕೊಳ್ಳುವ ಶಾರೀರಿಕ ಬಾಧೆಗಳನ್ನು ತಮ್ಮ ವಿದ್ಯೆಯ ಮೂಲಕ ಸಾವಿರಕ್ಕಿಂತಲೂ ಹೆಚ್ಚು ಮಂದಿಗೆ ಉಚಿತ ಚಿಕಿತ್ಸೆ ನೀಡುವ ಮೂಲಕ ಖ್ಯಾತರಾಗಿದ್ದರು. ಆಧ್ಯಾತ್ಮ, ಅತೀಂದ್ರಿಯವಾದ, ಮನಃಶಾಸ್ತ್ರ, ಇತಿಹಾಸ, ಧರ್ಮ ಪರಂಪರೆಗಳ ಬಗ್ಗೆ ಆಸಕ್ತರಾಗಿ ಅತೀವ ಅನುಭವಗಳನ್ನು ಪಡೆದು ತಮ್ಮನ್ನು ಭೇಟಿಯಾದವರಿಗೆ ಜ್ಞಾನದ ಅರಿವನ್ನು ವಿಸ್ತರಿಸುವಲ್ಲಿ ವಿಶಾಲ ಹೃದಯಿಗಳಾಗಿದ್ದರು. ಹೀಲಿಂಗ್ ಕ್ಷೇತ್ರದಲ್ಲಿ ಪಠ್ಯ ಮತ್ತು ಮಾಸ್ಟರ್ ಚೌವಾಕಾಕ್ಷಿ ತರಬೇತುದಾರರಾಗಿ ಹಲವಾರು ಶಿಷ್ಯವೃಂದವನ್ನು ತಯಾರುಗೊಳಿಸಿದ್ದಾರೆ. ಪ್ರಾಣಿಕ್ ವಿದ್ಯೆಯ ಜೊತೆಯಲ್ಲಿ ಡೌಸಿಂಗ್, ಹಿಪ್ನೋಟಿಸಂ, ರೇಖಿ ಎಂಬ ಕ್ಷೇತ್ರದಲ್ಲೂ ಪರಿಣತಿಯನ್ನು ಹೊಂದಿದ್ದರು. ಪ್ರಗತಿಪರ ಕೃಷಿಕರೂ ಆಗಿರುವ ಇವರು ಪಾರಂಪರಿಕವಾಗಿ ಬಂದ ಕಲ್ಲಕಟ್ಟದ ಹುಟ್ಟೂರಲ್ಲಿ ಅಪಾರ ಕೃಷಿಭೂಮಿ ಹೊಂದಿದ್ದರು.
ಮೃತರು ಪತ್ನಿ, ಪುತ್ರ, ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.


