ಕಾಸರಗೋಡು: ಇಂದು (ಏ.25) ವಿಶ್ವ ಮಲೇರಿಯಾ ದಿನ. 2007 ರಿಂದ ವಿಶ್ವ ಆರೋಗ್ಯ ಸಂಘಟನೆ ಪ್ರತಿವರ್ಷ ಏ.25ರಂದು ಮಲೇರಿಯ ನಿಯಂತ್ರಣ ದಿನಾಚರಣೆ ನಡೆಸುತ್ತಿದೆ. ಈ ವರ್ಷ "ಮಲೇರಿಯಾ ನಿವಾರಣೆ ನನ್ನಿಂದ ಆರಂಭ" ಎಂಬ ಘೋಷಣೆಯೊಂದಿಗೆ ನಡೆಯಲಿದೆ.
ಕಾಸರಗೋಡು ಜಿಲ್ಲೆಯಲ್ಲಿ ಕಳೆದ ಒಂದು ವರ್ಷ ದ ಅವಧಿಯಲ್ಲಿ 17 ಮಲೇರಿಯಾ ಕೇಸ್ ಗಳು ವರದಿಯಾಗಿದ್ದುವು. ಇವರಲ್ಲಿ 16 ಮಂದಿ ಪುರುಷರು, ಒಬ್ಬಾಕೆ ಮಹಿಳೆ. ಕಾಸರಗೋಡು ಕಸಬ ಕರಾವಳಿಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಮಲೇರಿಯಾ ಕೇಸ್ ಗಳು ವರದಿಯಾಗಿದ್ದುವು. ಇತರ ರಾಜ್ಯಗಳ ಕಾರ್ಮಿಕರ ಮೂಲಕ ರೋಗಸಾಧ್ಯತೆ ಅಧಿಕವಾಗಿದೆ ಎಂದು ಜಿಲ್ಲೆಯ ಆರೋಗ್ಯ ವಲಯದ ಪರಿಣತರು ತಿಳಿಸುತ್ತಾರೆ. ಅನೋಫಿಲಿಸ್ ವಿಭಾಗದ ಹೆಣ್ಣು ಸೊಳ್ಳೆ ಗಳಿಂದ ಮಲೇರಿಯಾ ಹರಡುತ್ತದೆ. ಆರೋಗ್ಯ ಇಲಾಖೆ ತಿಳಿಸುವ ಸೊಳ್ಳೆ ವಂಶಾಭಿವೃದ್ಧಿಯಾಗದಂತೆ ನೋಡಿಕೊಳ್ಳುವುದು, ಸೊಳ್ಳೆ ನಿವಾರಣೆ ಇತ್ಯಾದಿ ಸಲಹೆ-ಸೂಚನೆ ಪಾಲಿಸುವ ಮೂಲಕ ಮಲೇರಿಯಾ ನಿಯಂತ್ರಣ ಸಾಧ್ಯ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿರುವರು.


