ಮಂಜೇಶ್ವರ: ಉತ್ತರ ಕರ್ನಾಟಕದ ವಿವಿಧ ಭಾಗಗಳಲ್ಲಿರುವ ತಮ್ಮ ಮನೆಗಳಿಗೆ ತೆರಳಲು ಕೇರಳದಿಂದ ಹೊರಟ 16 ಮಂದಿ ಕೂಲಿ ಕಾರ್ಮಿಕರು ಮಂಜೇಶ್ವರದ ಹತ್ತಿರ ತಲಪಾಡಿ ಗಡಿಯಲ್ಲಿ ಕಳೆದೆರಡು ದಿನಗಳಿಂದ ಸಿಕ್ಕಿಹಾಕಿಕೊಂಡಿದ್ದಾರೆ.
ಕೇರಳ ಮತ್ತು ಕರ್ನಾಟಕ ಮಧ್ಯೆ ಸದ್ಯ ಗಡಿ ಸಮಸ್ಯೆ ಇರುವುದರಿಂದ ಮಂಗಳೂರು ಪೆÇಲೀಸರು ಅವರನ್ನು ಗಡಿಯೊಳಗೆ ಪ್ರವೇಶಿಸಲು ಬಿಡುತ್ತಿಲ್ಲ. ವಲಸೆ ಕೂಲಿ ಕಾರ್ಮಿಕರನ್ನು ಮಂಗಳೂರು ಒಳಗೆ ಪ್ರವೇಶಿಸಲು ಬಿಡಬಾರದು ಎಂದು ದಕ್ಷಿಣ ಕನ್ನಡ ಜಿಲ್ಲಾಡಳಿತ ನಿರ್ಧರಿಸಿರುವುದಕ್ಕೂ ಪಕ್ಕದ ಕೊಡಗು ಜಿಲ್ಲಾಡಳಿತದ ನಿರ್ಧಾರಕ್ಕೂ ವ್ಯತ್ಯಾಸವಿದೆ. ಕೊಡಗು ಜಿಲ್ಲೆಯಲ್ಲಿ ಸದ್ಯ ಕೇರಳದ ನೂರಾರು ವಲಸೆ ಕಾರ್ಮಿಕರು ಆಶ್ರಯ ಪಡೆದುಕೊಂಡಿದ್ದಾರೆ.
ಕಾಸರಗೋಡು ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ವ್ಯಾಪಕವಾಗಿರುವುದರಿಂದ ಗಡಿಯನ್ನು ಬಂದ್ ಮಾಡಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಡಳಿತ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ. ಕಾಸರಗೋಡಿನಲ್ಲಿ 110ಕ್ಕೂ ಹೆಚ್ಚು ಕೊರೋನಾ ಪೀಡಿತರಿದ್ದಾರೆ. ಧಾರವಾಡ, ಕೊಪ್ಪಳ, ಗದಗ ಮತ್ತು ಇತರ ಜಿಲ್ಲೆಗಳ ವಲಸೆ ಕಾರ್ಮಿಕರು ಕಾಸರಗೋಡಿನ ನೀಲೇಶ್ವರಕ್ಕೆ ಕೆಲಸಕ್ಕೆ ವಲಸೆ ಹೋಗಿದ್ದರು. ಇದೀಗ ಲಾಕ್ ಡೌನ್ ಆಗಿರುವುದರಿಂದ ತಮ್ಮ ದಿನಗೂಲಿ ಕೆಲಸಕ್ಕೆ ಕುತ್ತು ಬಂದು ಊರಿಗೆ ಹೋಗಲು ಸನ್ನದ್ದರಾಗಿ ಹೊರಟು ಮಧ್ಯೆ ಸಿಲುಕಿಕೊಂಡಿದ್ದಾರೆ.


