ನವದೆಹಲಿ: ದೇಶದಲ್ಲಿ ಕೊರೋನಾ ಆರ್ಭಟ ಹೆಚ್ಚಾಗುತ್ತಲೇ ಇದ್ದು, ಸೋಂಕಿತರ ಸಂಖ್ಯೆ 62,939ಕ್ಕೆ ಏರಿಕೆಯಾಗಿದೆ. ಅಲ್ಲದೆ, ಮಹಾಮಾರಿ ವೈರಸ್'ಗೆ 2,109 ಮಂದಿ ಬಲಿಯಾಗಿದ್ದಾರೆ.
ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 3,277 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದ್ದು, 128 ಮಂದಿ ಬಲಿಯಾಗಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯೊಂದರಲ್ಲಿಯೇ ನಿನ್ನೆ 338 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 6,000ಕ್ಕೆ ಏರಿಕೆಯಾಗಿದೆ. ಈ ನಡುವೆ 62,000 ಮಂದಿ ಸೋಂಕಿತರ ಪೈಕಿ 17,846 ಸೋಂಕಿತರು ಗುಣಮುಖರಾಗಿದ್ದು, ಇದರೊಂದಿಗೆ ದೇಶದಲ್ಲಿ ಗುಣಮುಕರಾಗುತ್ತಿರುವವರ ಶೇಕಡಾವಾರು 29.91ಕ್ಕೆ ತಲುಪಿದೆ. ದೇಶದಲ್ಲೇ ಅತೀ ಹೆಚ್ಚು ಸೋಂಕಿತರು ಮತ್ತು ಸಾವು ಕಂಡು ಬಂದ ಮಹಾರಾಷ್ಟ್ರ, ತಮಿಳುನಾಡು, ಗುಜರಾತ್ ನಲ್ಲಿ ಶನಿವಾರವೂ ಹೆಚ್ಚಿನ ಪ್ರ್ಕರಣಗಳು ವರದಿಯಾಗಿದೆ. ಮಹಾರಾಷ್ಟ್ರದಲ್ಲಿ ಶನಿವಾರ 1165 ಹೊಸ ಕೇಸ್ ನೊಂದಿಗೆ ಒಟ್ಟು ಸಂಖ್ಯೆ 20,228ಕ್ಕೆ ಏರಿದೆ.
ಸಾವಿಗೀಡಾದವರ ಸಂಖ್ಯೆ 779ಕ್ಕೆ ಜಿಗಿದಿದೆ. ಇನ್ನು ತಮಿಳುನಾಡಿನಲ್ಲಿ 526, ಗುಜರಾತ್ ನಲ್ಲಿ 394, ರಾಜಸ್ತಾನದಲ್ಲಿ 129, ಮಧ್ಯಪ್ರದೇಶದಲ್ಲಿ 116 ಹಾಗೂ ಬಂಗಾಳದಲ್ಲಿ 108 ಅತೀಹೆಚ್ಚು ಕೊರೋನಾ ಪ್ರಕರಣಗಳು ದಾಖಲಾಗಿವೆ.
ಈ ವರೆಗೆ ಅತೀ ಹೆಚ್ಚು ಸಾವು ದಾಖಲಾದ ರಾಜ್ಯಗಳೆಂದರೆ ಮಹಾರಾಷ್ಟ್ರ 779, ಗುಜರಾತ್ 472, ಮಧ್ಯಪ್ರದೇಶ 311, ಪ.ಬಂಗಾಳ 171, ರಾಜಸ್ತಾನದಲ್ಲಿ 106 ಮಂದಿ ಬಲಿಯಾಗಿದ್ದಾರೆ.


