ಇಂದಿನ ಮೂರು ಟಿಪ್ಪಣಿಗಳು ಇಲ್ಲಿವೆ.
೧. ಕತಾರಿಂದವೋ ಕತಾರ್‌ನಿಂದವೋ?
“ಕತಾರಿಂದ ಮರಳಲು 40000 ನೋಂದಣಿ" ಅಂತೊಂದು ತಲೆಬರಹ ಕನ್ನಡಪ್ರಭ ಪತ್ರಿಕೆಯ ೧೩ಮೇ೨೦೨೦ರ ಸಂಚಿಕೆಯಲ್ಲಿ ಪ್ರಕಟವಾಗಿದೆ. ಸಂದರ್ಭದಿಂದಾಗಿ ‘ಕತಾರಿಂದ’ ಅಂದರೆ ಕತಾರ್ ದೇಶದಿಂದ ಎಂದು ಯಾರಿಗಾದರೂ ಅರ್ಥವಾಗುವಂಥದೇ. ಅಲ್ಲದೆ, ಸುದ್ದಿವಿವರಣೆಯಲ್ಲಿ ‘ಕತಾರ್‌ನಿಂದ’ ಎಂದೇ ಬಳಸಿದ್ದಾರೆ. ಆದರೂ, ಆಡುಮಾತಿನಲ್ಲಿ ‘ಕತಾರಿಂದ’ ಅಂತ ಹೇಳುತ್ತೇವೆಂದ ಮಾತ್ರಕ್ಕೆ ಶಿಷ್ಟ (formal) ಬರವಣಿಗೆಯಲ್ಲಿ, ವಿಶೇಷವಾಗಿ ದಿನಪತ್ರಿಕೆಯ ಸುದ್ದಿಶೀರ್ಷಿಕೆಯಲ್ಲಿ ಇಂತಹ ಪದಬಳಕೆ ಒಳ್ಳೆಯದಲ್ಲ.
ಏಕೆ ಎಂದು ಒಮ್ಮೆ ಆಲೋಚಿಸಿ ನೋಡಿ. ‘ಕತಾರ್‌ನಿಂದ’ ಅಂತಿದ್ದದ್ದು ‘ಕತಾರಿಂದ’ ಆದಂತೆ, ‘ಅಮೆರಿಕಾದಿಂದ’ ಎಂದಿರಬೇಕಾದದ್ದು ‘ಅಮೆರಿಕಿಂದ’ ಆಗಬಹುದು. ಸ್ಪೇನ್‌ನಿಂದ ಎಂದಿರಬೇಕಾದದ್ದು ‘ಸ್ಪೇನಿಂದ’ ಎಂದಾಗಬಹುದು. ಲಂಡನ್‌ನಿಂದ ಎಂದಿರಬೇಕಾದದ್ದು ‘ಲಂಡನಿಂದ’ ಎಂದಾಗಬಹುದು. ಮುಂಬಯಿಯಿಂದ ಎಂದಿರಬೇಕಾದ್ದು ‘ಮುಂಬಯಿಂದ’ ಎಂದಾದೀತು! ಇವೆಲ್ಲ ಆಡುಮಾತಿನಲ್ಲಿ, ಮಾತಿನ ಭರದಲ್ಲಿ ಪರವಾ ಇಲ್ಲ. ಆದರೆ ಬರವಣಿಗೆಯಲ್ಲಿ ದೇಶದ, ರಾಜ್ಯದ, ಊರಿನ ಹೆಸರನ್ನು- ಒಟ್ಟಾರೆಯಾಗಿ ಅಂಕಿತನಾಮಗಳನ್ನು- ಊನಗೊಳಿಸುವುದು ಸರಿಯಲ್ಲ. ಸ್ಪೇನಿಂದ ಎಂದು ಬರೆದರೆ ಸ್ಪೇನ್ ದೇಶದ ಹೆಸರನ್ನು ನಾವು ‘ಸ್ಪೇ’ ಎಂದು ಮಾಡಿದಂತಾಗುವುದಿಲ್ಲವೇ? ಲಂಡನಿಂದ ಎಂದು ಬರೆದರೆ ಲಂಡನ್ ನಗರವನ್ನು ನಾವು ಲಂಡ ಎಂದು ಮೂದಲಿಸಿದಂತಾಗುವುದಿಲ್ಲವೇ? (ಲಂಡ ಅಂದರೆ ‘ಸಾಲಾಗಿ ಬಿದ್ದಿರುವ ಕುದುರೆಲದ್ದಿ’ ಅಥವಾ ಮಲ ಎಂಬರ್ಥ; ದುಷ್ಟ, ನೀಚ ಎಂಬರ್ಥದಲ್ಲೂ ‘ಲಂಡ’ ಬಳಕೆಯಾಗುತ್ತದೆ). ಮೂಲ ಹೆಸರುಗಳನ್ನು ಇದ್ದಂತೆ ಬಳಸುವುದು ಸೂಕ್ತ. [ಇದಿಷ್ಟು, ಗಂಗಾವತಿಯಿಂದ ಕಾರ್ತಿಕ್ ದೇಶಪಾಂಡೆ ಅವರ ಟಿಪ್ಪಣಿ]
ಇದಲ್ಲದೆಯೂ, ನಾಮಪದಗಳೊಂದಿಗೆ ವಿಭಕ್ತಿಪ್ರತ್ಯಯ ಸೇರಿಸಿದಾಗ ಅರ್ಥ-ಅಪಾರ್ಥ-ಅನರ್ಥವೇನಾದರೂ ಆಗುವ ಸಂಭವವಿದೆಯೇ ಎಂದು ಒಮ್ಮೆ ಓದಿನೋಡುವುದು ಒಳ್ಳೆಯದು.
"ಬಾಪೂಗೆ ಬಾರಿಂದ ಆದೇಶ ಬಂತು" ಎಂಬ ವಾಕ್ಯವನ್ನು ಗಮನಿಸಿ. ಇದಕ್ಕೆ ಈ ಕೆಳಗಿನ ನಾಲ್ಕು ಅರ್ಥಗಳು ಹೊರಹೊಮ್ಮುವ ಸಾಧ್ಯತೆಯಿದೆ!
ಅ) ಗಾಂಧೀಜಿಯವರಿಗೆ ಪತ್ನಿ ಕಸ್ತೂರಿ ಬಾ ಅವರಿಂದ ಆದೇಶ ಬಂತು (“ಅಡುಗೆ ಸಿದ್ಧವಾಗಿದೆ ಊಟಕ್ಕೆ ಬನ್ನಿ" ಎಂದು).
ಆ) ಗಾಂಧೀಜಿಯವರಿಗೆ ವಕೀಲರ ಎಸೋಸಿಯೇಷನ್‌ನಿಂದ ಆದೇಶ ಬಂತು (“ನಾಳೆ ಕೋರ್ಟಿಗೆ ಬನ್ನಿ" ಎಂದು).
ಇ) ಗಾಂಧೀಜಿಯವರಿಗೆ ಮದ್ಯದಂಗಡಿಯಿಂದ ಆದೇಶ ಬಂತು (“ಮದ್ಯಪಾನ ಒಳ್ಳೆಯದಲ್ಲ ಅಂತ ಉಪದೇಶಿಸುವುದನ್ನು ಬಿಟ್ಟಿಬಿಡಿ"ರೆಂದು).
ಈ) ಗಾಂಧೀಜಿಯವರಿಗೆ ಚಪ್ಪಲಿಯ ಬಾರ್‌ನಿಂದ ಆದೇಶ ಬಂತು (“ನಿಮ್ಮ ದಂಡಿಸತ್ಯಾಗ್ರಹವೋ ನೀವೋ... ನಾನಿಲ್ಲಿ ಸವೆದುಹೋಗುತ್ತಿದ್ದೇನೆ ತುಂಡಾಗುತ್ತಿದ್ದೇನೆ ದಯೆ ತೋರಿ" ಎಂದು).
===
೨. ಪತ್ರಿಕೆಗಳಲ್ಲಿ ಪದಪ್ರಯೋಗ (ಅ)ಚಾತುರ್ಯ
ಅ) “ಕೊರೋನಾಜನಕ ಸ್ಥಿತಿಗೆ ರಾಜ್ಯದ ಆಸ್ಪತ್ರೆಗಳು ಸಿದ್ಧ" [ಕನ್ನಡಪ್ರಭ. ೧೧ಮೇ೨೦೨೦. ಗಮನಿಸಿ ಕಳುಹಿಸಿದವರು: ಶಂಕರ ಯಂಡಿಗೇರಿ]. ಜನಕ ಎಂಬ ಪದಕ್ಕೆ ಮೂರು ಅರ್ಥಗಳಿವೆ: ೧. ತಂದೆ. ೨. ವಿದೇಹಾಧಿಪತಿ ಜನಕಮಹಾರಾಜ (ಸೀತೆಯ ತಂದೆ). ೩. ಉತ್ಪತ್ತಿಮಾಡುವವ. ಯಾವುದಾದರೂ ಪದಕ್ಕೆ ‘ಜನಕ’ವನ್ನು ಸೇರಿಸಿ ಬರೆದರೆ ‘ಅದನ್ನು ಉಂಟುಮಾಡುವ’ ಎಂಬ ಅರ್ಥ ಬರುವುದು. ಚಿಂತಾಜನಕ ಅಂದರೆ ಚಿಂತೆಯನ್ನುಂಟುಮಾಡುವ. ಕರುಣಾಜನಕ ಅಂದರೆ ಕರುಣೆಯನ್ನುಂಟುಮಾಡುವ. ಜಲಜನಕ ಅಂದರೆ ನೀರನ್ನು ಉಂಟುಮಾಡುವ (‘ಹೈಡ್ರೋಜನ್’ ಪದದ ಅರ್ಥವೂ ಅದೇ). ಇದೀಗ ಕನ್ನಡಪ್ರಭ ಕಳಕಳಿಯ ಪ್ರಕಾರ ರಾಜ್ಯದ ಆಸ್ಪತ್ರೆಗಳು ‘ಕೊರೊನಾ ವೈರಸ್‌ಅನ್ನು ಉತ್ಪತ್ತಿಮಾಡುವುದಕ್ಕೆ’ ಸಿದ್ಧವಾಗಿವೆಯಂತೆ! ಮುಖಪುಟದಲ್ಲಿ ಬಾಕ್ಸ್‌ಐಟಂನಲ್ಲಿ ಕಣ್ಣಿಗೆ ರಾಚುವಂತೆ ಪ್ರಕಟವಾಗಿರುವ ಸುದ್ದಿ ಇದು! ಅಸ್ಪತ್ರೆಗಳಿರುವುದು ಕೊರೊನಾವನ್ನು ನಿರ್ನಾಮಗೊಳಿಸುವುದಕ್ಕೆ ಎಂದುಕೊಂಡಿದ್ದೆವು. ಇಲ್ಲಿ ನೋಡಿದರೆ ಕೊರೊನಾವನ್ನು ಸೃಷ್ಟಿಸಲಿಕ್ಕೆ ಆಸ್ಪತ್ರೆಗಳು ಸಿದ್ಧವಾಗಿವೆಯಂತೆ. ಇಷ್ಟೊಂದು ಅಸಮರ್ಪಕ ಪದಬಳಕೆ ಕನ್ನಡ ಪತ್ರಿಕೆಗಳಲ್ಲಿ ಆಗುತ್ತಿದೆಯೆಂದರೆ ಇದನ್ನು ಚಿಂತಾಜನಕ ಸ್ಥಿತಿ ಎನ್ನೋಣವೇ? ಓದುಗರದು ಕರುಣಾಜನಕ ಪರಿಸ್ಥಿತಿ ಎನ್ನೋಣವೇ?
ಆ) “ಉಡುಪಿ ನಗರಕ್ಕಿಲ್ಲ ಜಲಬಾಧೆ" [ವಿಜಯವಾಣಿ. ೮ಮೇ೨೦೨೦. ಗಮನಿಸಿ ಕಳುಹಿಸಿದವರು: ರಾಮಚಂದ್ರ ಪೈ]. ಪ್ರತಿವರ್ಷ ನೀರಿನ ಸಮಸ್ಯೆಯಿಂದ ಬಳಲುತ್ತಿದ್ದ ಉಡುಪಿ ನಗರ ಈ ವರ್ಷ ಅದರಿಂದ ಪಾರಾಗುವ ಲಕ್ಷಣ ತೋರಿಸಿದೆ ಎಂದು ಸುದ್ದಿಯ ವಿವರ. ಎಡವಟ್ಟಾಗಿರುವುದೇನೆಂದರೆ ‘ಜಲಬಾಧೆ’ ಎಂಬ ಪದವನ್ನು ಬಳಸುವುದು ಬರಗಾಲ ಎಂಬುದಕ್ಕಲ್ಲ, ಮೂತ್ರವಿಸರ್ಜನೆಯ ತುರ್ತಿನ ಸಂದರ್ಭವನ್ನು ತಿಳಿಸುವುದಕ್ಕೆ! ಉದಾ: "ಮಕ್ಕಳ ಹಕ್ಕುಗಳ ದಿನಾಚರಣೆಗೆ ಬಂದಿದ್ದ ಸಾವಿರಾರು ಮಕ್ಕಳು ಕಬ್ಬನ್ ಪಾರ್ಕ್‍ನಲ್ಲಿ ತಾತ್ಕಾಲಿಕ ಶೌಚಾಲಯ ವ್ಯವಸ್ಥೆ ಇಲ್ಲದ್ದರಿಂದ ಜಲಬಾಧೆ ತೀರಿಸಿಕೊಳ್ಳಲು ಪರದಾಡಿದರು.", “ನನಗೆ ಜಲಬಾಧೆ ತೀರಿಸ್ಕೊಳ್ಬೇಕಾಗಿತ್ತಾದ್ರಿಂದ ಬಸ್ ನಿಲ್ಲಿಸುವಂತೆ ಚಾಲಕನನ್ನು ವಿನಂತಿಸಿದೆ.", “ಪ್ರಮುಖ ಪ್ರವಾಸಿ ತಾಣ ಕುಕ್ಕರಹಳ್ಳಿ ಕೆರೆಗೆ ವಿಹಾರಕ್ಕೆ ಬರುವವರಿಗೆ ಜಲಬಾಧೆ ಉಂಟಾದರೆ ಮರದ ಮರೆ ಆಶ್ರಯಿಸದೆ ಬೇರೆ ದಾರಿಯೇ ಇಲ್ಲ.", "ಅಮೆರಿಕೆಯಲ್ಲಿ ಇದ್ದಷ್ಟು ದಿನಗಳೂ ತಂಗಾಳಿಗೆ ಮೈ ಒಡ್ಡಿ ಸುತ್ತಮುತ್ತ ಪ್ರಕೃತಿ ವೈಭವವನ್ನು ನೋಡುತ್ತ ಜಲಬಾಧೆ ತೀರಿಸಿಕೊಳ್ಳುವ ಅವಕಾಶವೇ ನನಗಿಲ್ಲವಾಗಿತ್ತು!" ಇತ್ಯಾದಿ. ಒಂದೂವರೆ ಶತಮಾನದ ಹಿಂದೆ, ಕ್ರಿ.ಶ 1865ರಲ್ಲಿ ಪ್ರಕಟವಾದ "A Manual English And Canerese Dictionary" (By John Garrett, Director of Public Instruction In Mysore) ಈ ನಿಘಂಟುವಿನಲ್ಲಿ "Pissing" ಎಂಬ ಪದಕ್ಕೆ "ಜಲಬಾಧೆ" ಎಂಬ ಅರ್ಥ ಕೊಟ್ಟಿದ್ದಾರೆ.
ಇ) “ಪತಪತನೆ ಉದುರಿಬಿದ್ದ ಜನ" [ವಿಜಯಕರ್ನಾಟಕ. ೮ಮೇ೨೦೨೦. ಗಮನಿಸಿ ಕಳುಹಿಸಿದವರು: ಮಂಜುನಾಥ ಡಿ.ಎಸ್]. ವಿಶಾಖಪಟ್ಟಣದಲ್ಲಿ ನಡೆದ ವಿಷಾನಿಲ ದುರಂತದ ಸುದ್ದಿಯ ತಲೆಬರಹ. ಒಂದರಹಿಂದೊಂದು ಉದುರಿಬೀಳುವುದಕ್ಕೆ ಬಳಕೆಯಲ್ಲಿರುವ ಅನುಕರಣ ಶಬ್ದ ‘ತಪತಪನೆ’ ಎಂದು. ಉದಾ: "ಒಂದೆಡೆ ತಪತಪನೆ ವಿಕೆಟ್‌ಗಳು ಬೀಳುತ್ತಿದ್ದರೂ ದೊಡ್ಡ ಹೊಡೆತಗಳ ಮೂಲಕ ಇಂಗ್ಲೆಂಡ್ ಗೆಲುವಿನತ್ತ". ಅದಕ್ಕಿಂತಲೂ ಒಳ್ಳೆಯ ಉದಾಹರಣೆಯನ್ನು ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರ ‘ಅರುಣಗೀತ’ ಎಂಬ ಸುಂದರ ಕವಿತೆಯ ಸಾಲುಗಳಿಂದ ಕೊಡಬಹುದು: ‘ಕೋಟಿಗಳ ಅಣಕಿಸುವ ನಕ್ಷತ್ರಗಂಗೆಗಳೆ| ಅಂತರಿಕ್ಷದ ಮಹಿಮೆ ಹಾಡುವ ಅಭಂಗಗಳೆ| ವಿಶ್ರಾಂತಿಗಾಗಿ ಶಚಿ ಕಳಚಿಟ್ಟ ತೊಡವುಗಳೆ| ಗಾಳಿಯಲುಗಾಟಕ್ಕೆ ಪಾರಿಜಾತದ ವೃಕ್ಷ| ತಪತಪನೆ ಸುರಿಸಿರುವ ಹೂವುಗಳೇ ಹೇಳಿ..." ರಾತ್ರಿಯಲ್ಲಿ ನಕ್ಷತ್ರನಿಬಿಡವಾದ ನೀಲಾಕಾಶವನ್ನು ಕಂಡು ಕವಿಯ ಭಾವಸ್ಥಿತಿ. ಇಂತಹ ‘ತಪತಪನೆ’ ಶಬ್ದವನ್ನು ‘ಪತಪತನೆ’ ಎಂದು ಬರೆದ ಪತ್ರಕರ್ತನ ಪದಜ್ಞಾನ ‘ಪತಪತನೆ’ ಪತನ ಆದದ್ದಿರಬಹುದೇ?
ಈ) “ಸೋಂಕಿಗೆ ರಾಜ್ಯದಲ್ಲಿ ಹೆಚ್ಚಿದ ಆತಂಕ" [ವಿಶ್ವವಾಣಿ. ೧೦ಮೇ೨೦೨೦. ಗಮನಿಸಿ ಕಳುಹಿಸಿದವರು: ಮಂಜುನಾಥ ಡಿ.ಎಸ್]. ಸೋಂಕಿನಿಂದ ಜನರಿಗೆ ಆತಂಕವಾಗಿದೆಯೇ ಹೊರತು ಸೋಂಕಿಗೆ ಏಕೆ ಆತಂಕ? ತನಗೆ ಬೇಕಾದಷ್ಟು ಜನರು ಸಿಗಲಿಲ್ಲವೆಂದೇ? "ಒಂದೋ ವಿಭಕ್ತಿಪ್ರತ್ಯಯ ಬಳಸುವುದೇ ಇಲ್ಲ, ಬಳಸಿದರೆ ತಪ್ಪಾಗಿ ಬಳಸುತ್ತೇವೆ" ಎಂದು ಪತ್ರಕರ್ತರಿಗೇನಾದರೂ ಪ್ರತಿಜ್ಞಾವಿಧಿ ಇದೆಯೇ ಏನು ಕಥೆ?
ಉ) “ಡಾಕ್ಟರ್ ಬಳಿ ಚಿಕಿತ್ಸೆ ಪಡೆದವರಿಗೂ ಈಗ ಕಂಕಟ?" [ಪಬ್ಲಿಕ್ ಟಿವಿ. ೧೩ಮೇ೨೦೨೦. ಗಮನಿಸಿ ಕಳುಹಿಸಿದವರು: ಸಂಧ್ಯಾ ವಸಂತ್]. ಸಂಕಟ ಬಂದಾಗ ವೇಂಕಟರಮಣ ಇದ್ದಂತೆ ‘ಕಂಕಟ ಬಂದಾಗ When cutಕೊರೊನ’?
ಆದರೆ, ಈ ಕೆಳಗಿನ ಶೀರ್ಷಿಕೆ ಮೇಲ್ನೋಟಕ್ಕೆ ಅಸಂಬದ್ಧವೆನಿಸಿದರೂ ಕ್ರಿಯೇಟಿವ್ ಎನಿಸಿಕೊಳ್ಳುವಂಥದ್ದು. ಇದು ಉದ್ದೇಶಪೂರ್ವಕ ಶ್ಲೇಷೆ (ಪನ್) ಪ್ರಯೋಗ ಇರಬಹುದು. ಚೆನ್ನಾಗಿದೆ!
"ಮದ್ಯ ಮಾರಾಟಕ್ಕೆ ಬೆಲ್ಲದ ವಿರೋಧ" [ವಿಜಯವಾಣಿ. ೬ಮೇ೨೦೨೦.ಗಮನಿಸಿ ಕಳುಹಿಸಿದವರು: ಶಂಕರನಾರಾಯಣ ಉಪಾಧ್ಯಾಯ] ಶಾಸಕ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಬಿಜೆಪಿ ಜಿಲ್ಲಾಧ್ಯಕ್ಷ ಅರವಿಂದ ಬೆಲ್ಲದ ಅವರು, ಮದ್ಯ ಮಾರಾಟಕ್ಕೆ ಅನುಮತಿ ನೀಡಿರುವ ರಾಜ್ಯಸರ್ಕಾರದ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ ಸುದ್ದಿಯ ತಲೆಬರಹವಿದು. ವಸ್ತ್ರದ, ಬೆಲ್ಲದ ಮುಂತಾದ ಉಪನಾಮಧೇಯಗಳು ಉತ್ತರಕರ್ನಾಟಕದಲ್ಲಿ ಕಂಡುಬರುತ್ತವೆ. ಇಲ್ಲಿ ‘ಬೆಲ್ಲದ’ ಪದಬಳಕೆ ತಲೆಬರಹವನ್ನೋದುವಾಗ ಕಿರುನಗೆ ಮೂಡಿಸುವಂತೆ ಇದೆ.
===
೩. ಪದೇ ಪದೇ ತಪ್ಪಾಗಿ ಕಾಣಿಸಿಕೊಳ್ಳುವ ಪದಗಳು
ಅ) ಬಂಡವಾಳ ಸರಿ. ಅಸಲು, ಮೂಲಧನ, ಬೆಲೆ ಇತ್ಯಾದಿ ಅರ್ಥ. ಆಲಂಕಾರಿಕವಾಗಿ ಸತ್ತ್ವ, ತಿರುಳು ಎಂಬುದಕ್ಕೂ ಬಳಕೆಯಾಗುತ್ತದೆ. ಭಂಡವಾಳ ಎಂದು ಮಹಾಪ್ರಾಣಾಕ್ಷರ ಬೇಕಿಲ್ಲ.
ಆ) ಪಿಂಚಣಿ ಸರಿ. ನಿವೃತ್ತಿವೇತನ ಎಂಬ ಅರ್ಥ. ಇದು, ಇಂಗ್ಲಿಷ್‌ನ Pension ಪದದಿಂದಲೇ ಬಂದದ್ದೆನ್ನುತ್ತಾರೆ ಪ್ರೊ.ಜಿ.ವೆಂಕಟಸುಬ್ಬಯ್ಯ. ಪಿಂಛಣಿ, ಪಿಂಚಿಣಿ ಮುಂತಾದ ಪ್ರಯೋಗಗಳು ಸಾಧುವಲ್ಲ.
ಇ) ಸಾಮುದಾಯಿಕ ಸರಿ. ಸಮುದಾಯಕ್ಕೆ ಸಂಬಂಧಿಸಿದುದು ಎಂಬರ್ಥ. ’ಇಕ’ ಪ್ರತ್ಯಯ ಸೇರಿದಾಗ ಪದದ ಮೊದಲ ಅಕ್ಷರ ದೀರ್ಘಸ್ವರವಾಗುವ ನಿಯಮದಂತೆ, ಸಮುದಾಯ + ಇಕ = ಸಾಮುದಾಯಿಕ. ಇದನ್ನು ಸಮುದಾಯಿಕ ಎಂದು ಬರೆದರೆ ತಪ್ಪು.
ಈ) ಅಭೀಷ್ಟ ಸರಿ. ಇಷ್ಟವಾದ, ಪ್ರೀತಿಪಾತ್ರವಾದ, ಸುಂದರವಾದ ಎಂಬ ಅರ್ಥ. ಅಭೀಷ್ಠ ಎಂದು ಮಹಾಪ್ರಾಣ ಒತ್ತಕ್ಷರ ತಪ್ಪು.
ಉ) ನೈವೇದ್ಯ ಸರಿ. ದೇವರ ನಿವೇದನಕ್ಕೆ ಯೋಗ್ಯವಾದ ವಸ್ತು. ಷೋಡಶೋಪಚಾರಗಳಲ್ಲೊಂದು. ಇದನ್ನು ನೈವೇಧ್ಯ, ನೇವೇದ್ಯ ಅಂತೆಲ್ಲ ಬರೆಯುವುದು ತಪ್ಪು.
ಬರಹ-ಶ್ರೀವತ್ಸ ಜೋಶಿ.ವಾಶಿಂಗ್ಟನ್ ಡಿ.ಸಿ.




