ತಿರುವನಂತಪುರ: ನಾಲ್ಕನೇ ಲಾಕ್‍ಡೌನ್ ಆರಂಭಗೊಳ್ಳುತ್ತಿರುವಂತೆ ರಾಜ್ಯ ವ್ಯಾಪಕ ನಿಯಂತ್ರಣಗಳನ್ನು ಷರತ್ತುಬದ್ದವಾಗಿ ಹಿಂತೆಗೆಯಲಾಗುತ್ತಿದ್ದು, ಕೆಎಸ್‍ಆರ್‍ಟಿಸಿ ಬಸ್ ಸೇವೆ ಆರಂಭಗೊಂಡಿದೆ.ಆದರೆ ಜನಸಂಚಾರ ವಿರಳವಾಗಿರುವುದರಿಂದ ವಾಹನಗಳ ಸಂಚಾರ, ಬಸ್ ಪ್ರಯಾಣ ಸ್ವಸ್ಥಿತಿಗೆ ಇನ್ನೂ ಬಂದಂತಿಲ್ಲ. ಕೆಎಸ್‍ಆರ್‍ಟಿಸಿಯು ಸೋಮವಾರ ಸೇವೆ ಆರಂಭಗೊಂಡ ಮೊದಲ ದಿನವೇ 60 ಲಕ್ಷ ರೂ.ಗಳ ನಷ್ಟ ಅನುಭವಿಸಿದೆ. ಈ ನಿಟ್ಟಿನಲ್ಲಿ ಉಂಟಾದ ನಷ್ಟಕ್ಕೆ ಕೇಂದ್ರ ಸಾರಿಗೆ ಇಲಾಖೆಯನ್ನು ಸಂಪರ್ಕಿಸಲು ರಾಜ್ಯ ಸಾರಿಗೆ ಇಲಾಖೆ ನಿರ್ಧರಿಸಿದೆ.
ಗುರುವಾರ ಒಟ್ಟು 1432 ಬಸ್‍ಗಳು ರಾಜ್ಯಾದ್ಯಂತ ಸಂಚಾರ ನಡೆಸಿದ್ದವು. ಒಟ್ಟು 2,41,223 ಕಿ.ಮೀ. ಪ್ರಯಾಣ ನಡೆಸಿರುವುದಾಗಿ ತಿಳಿದುಬಂದಿದೆ. ಗುರುವಾರ ಒಟ್ಟು ಸುಮಾರು 51 ಲಕ್ಷ ರೂ. ನಷ್ಟ ಉಂಟಾಗಿದೆಯೆಂದು ಅಂಕಿಅಂಶಗಳು ತಿಳಿಸಿವೆ. ಈ ನಿಟ್ಟಿನಲ್ಲಿ ನಿಧಾನವಾಗಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿರುವುದಾಗಿಯೂ ತಿಳಿಯಲಾಗಿದೆ.
ಒಂದು ಕಿ.ಮೀ. ಬಸ್ ಸಂಚಾರಕ್ಕೆ 45 ರೂ. ಅಗತ್ಯವಿದೆ. ಗುರುವಾರ, ಕಿ.ಮೀ 23.45 ರೂ. ಮಾತ್ರ ಲಭ್ಯವಾಗಿದೆ. ಸಾಮಾಜಿಕ ದೂರವನ್ನು ಕಾಪಾಡಿಕೊಂಡು ಬಸ್‍ನಲ್ಲಿ ಅರ್ಧದಷ್ಟು ಪ್ರಯಾಣಿಕರಿಗೆ ಸೇವೆ ಸಲ್ಲಿಸಬೇಕಾಗಿರುವುದರಿಂದ ಕೆಎಸ್‍ಆರ್‍ಟಿಸಿ ನಷ್ಟದಲ್ಲಿದೆ ಎಂದು ವಿಶ್ಲೇಶಿಸಲಾಗಿದೆ.


