ನವದೆಹಲಿ: ಕೊರೋನಾ ವೈರಸ್ ಲಾಕ್ ಡೌನ್ ಕಾರಣದಿಂದ ಇಡೀ ವಿಶ್ವವೇ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಸಮಯದಲ್ಲಿ ಇನ್ಫೋಸಿಸ್ ಸಹ ಸಂಸ್ಥಾಪಕ, ಆಕ್ಸಿಲರ್ ವೆಂಚುರ್ಸ್ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್, ಈ ಎಲ್ಲಾ ಸಮಸ್ಯೆಗಳು ಮುಗಿದ ಮೇಲೆ ಭಾರತದ ಐಟಿ ವಲಯ ಮತ್ತಷ್ಟು ಬಲಿಷ್ಠವಾಗಿ ಬೆಳೆಯಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸದ್ಯ ಲಾಕ್ ಡೌನ್ ಕಾರಣದಿಂದ ಐಟಿ ಉದ್ಯಮಕ್ಕೆ ಹೊಡೆತವಿದ್ದರೂ ಕೂಡ ಇದು ತಾತ್ಕಾಲಿಕವಷ್ಟೆ. ಈ ಸಮಸ್ಯೆಗಳೆಲ್ಲ ಮುಗಿದ ಬಳಿಕ ಐಟಿ ಉದ್ಯಮ ಮತ್ತಷ್ಟು ಬಲಿಷ್ಠವಾಗಿ ಬೆಳೆಯಲಿದೆ ಎಂದರು. ಅವರು ಮಾಧ್ಯಮ ಎಕ್ಸ್ ಪ್ರೆಷನ್ಸ್ ನಲ್ಲಿ ಪತ್ರಕರ್ತ ಶಂಕರ್ ಅಯ್ಯರ್ ಜೊತೆಗೆ ಮಾತನಾಡುತ್ತಾ ಕೋವಿಡ್-19 ನಂತರ ಭಾರತದಲ್ಲಿ ಆರ್ಥಿಕ ಪುನಶ್ಚೇತನದ ಬಗ್ಗೆ ಮಾತನಾಡುತ್ತಿದ್ದರು.
ಸದ್ಯ ಐಟಿ ಮತ್ತು ಐಟಿಇಎಸ್ ಎರಡೂ ವಲಯಗಳಿಗೆ ತೀವ್ರ ಹೊಡೆತ ಬಿದ್ದಿದೆ. ಆದರೆ ಅವರು ನಿರ್ಮಾಣಮಾಡಿಕೊಂಡಿರುವ ಸಂಬಂಧ ಬಲಿಷ್ಠವಾಗಿದ್ದು ಆರ್ಥಿಕ ಪುನಶ್ಚೇತನಕ್ಕೆ ಇದು ಸಹಾಯವಾಗಲಿದೆ ಎಂದರು. ಐಟಿ ಮತ್ತು ಐಟಿಇಎಸ್ ವಲಯಗಳು ಜಗತ್ತಿನಲ್ಲಿ ಪ್ರಮುಖ 20 ಕಂಪೆನಿಗಳ ಜೊತೆ ಕೆಲಸ ಮಾಡುತ್ತಿದ್ದು ಪ್ರತಿಯೊಬ್ಬರೂ ಸದ್ಯ ಆದಾಯದಲ್ಲಿ ಕುಸಿತ ಕಾಣುತ್ತಿದ್ದಾರೆ. ಪ್ರವಾಸ ಮತ್ತು ಹೊಟೇಲ್ ಉದ್ಯಮಕ್ಕೆ ತೀವ್ರ ಹೊಡೆತ ಬಿದ್ದಿದೆ. ಇದು ಐಟಿ ವಲಯಗಳಿಗೂ ವರ್ಗಾವಣೆಯಾಗಿದ್ದು ಅವುಗಳಲ್ಲಿ ಕೂಡ ಆದಾಯ ಕುಸಿತವಾಗಿದೆ ಎಂದರು.
ಜನರ ಸಂಚಾರ, ಚಟುವಟಿಕೆಗಳಿಗೆ ಅನುವು ಮಾಡಿಕೊಟ್ಟಿದ್ದರಿಂದ ವೈರಸ್ ಹೆಚ್ಚಾಗಿ ಪಸರಿಸುತ್ತಿದೆ ಎನಿಸಿದರೂ ಕೂಡ ಆರ್ಥಿಕತೆಯನ್ನು ಮರು ನಿರ್ಮಾಣ ಮಾಡಲು ಅದೊಂದೇ ಮಾರ್ಗವಿರುವುದು ಎಂದು ಹೇಳಿದರು.





